

ಬೆಂಗಳೂರು: ರಾಜಭವನಕ್ಕೆ ಬಾಂಗ್ಲಾದೇಶದ ರೀತಿಯಲ್ಲಿ ಮುತ್ತಿಗೆ ಹಾಕುವ ಹೇಳಿಕೆ ವಿಚಾರವಾಗಿ ಎದ್ದಿರುವ ವಿವಾದಕ್ಕೆ ತೆರೆ ಎಳೆಯಲು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಮುಂದಾಗಿದ್ದಾರೆ. ಪಕ್ಷದಲ್ಲೂ ಈ ಹೇಳಿಕೆ ಬಗ್ಗೆ ವ್ಯಾಪಕ ಚರ್ಚೆಯಾಗಿದ್ದು, ಹೈಕಮಾಂಡ್ ಕೂಡ ಮಾಹಿತಿ ತರಿಸಿಕೊಂಡಿದೆ.
ಈ ನಡುವೆ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಐವಾನ್ ಡಿಸೋಜಾ, ಬಾಂಗ್ಲಾದೇಶದ ಘಟನೆಯನ್ನು ಉದಾಹರಣೆಯಾಗಿ ಮಾತ್ರ ಕೊಟ್ಟಿದ್ದೇನೆ, ಬಾಂಗ್ಲಾದೇಶ ನನ್ನ ಮಾಡೆಲ್ ಅಂತ ಹೇಳಿಲ್ಲ. ನನ್ನ ಹೇಳಿಕೆಯನ್ನ ತಿರುಚಿದ್ದಾರೆ ಎಂದರು.
ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ, ಇದರ ವಿರುದ್ಧ ಪ್ರತಿಭಟನೆ ಇತ್ತು. ಸಂವಿಧಾನ ಬದ್ಧ ಅಧಿಕಾರ ಇರುವವರು ಸರಿಯಾಗಿ ತೀರ್ಮಾನ ಮಾಡಬೇಕು. ಕಾನೂನನ್ನು ಸರಿಯಾಗಿ ಪಾಲನೆ ಮಾಡದಿದ್ದರೆ ಬಾಂಗ್ಲಾದೇಶದ ರೀತಿಯಲ್ಲಿ ಘಟನೆ ನಡೆಯುತ್ತದೆ ಎಂದು ನಾನು ಉದಾಹರಣೆಯಾಗಿ ಹೇಳಿಕೆ ನೀಡಿದ್ದೇನೆ, ಅಂತಹ ಪರಿಸ್ಥಿತಿ ತರಿಸಿಕೊಳ್ಳುವುದು ಬೇಡ ಅಂತ ಹೇಳಿದ್ದೇನೆ ಎಂದು ಸಮಜಾಯಿಷಿ ನೀಡಲು ಪ್ರಯತ್ನ ಮಾಡಿದರು.
ಬಿಜೆಪಿ, ಜೆಡಿಎಸ್‌ಗೆ ಬೇಕಾಗಿರುವುದು ರಾಜಕೀಯ ಮಾತ್ರ. ಕಾಂಗ್ರೆಸ್ ನಾಯಕರ ಬಗ್ಗೆ ಅವರೆಲ್ಲ ಏನು ಮಾತನಾಡಿದ್ದರೆ, ಅದರ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಲಿ ಎಂದ ಅವರು ಬಾಂಗ್ಲಾದೇಶ ನಮ್ಮ ್ರ್ರೆಂಡ್ಲಿ ದೇಶ. ಅಲ್ಲಿಯ ಪ್ರಧಾನಿ ಎಲ್ಲಿ ಬಂದು ಎಲ್ಲಿ ಕೂತಿದ್ದಾರೆ. ಇದರ ಬಗ್ಗೆ ಕೂಡ ಮಾತನಾಡಲಿ. ನಾನು ಜವಾಬ್ದಾರಿಯಿಂದ ಮಾತನಾಡಿದ್ದೇನೆ. ಕೇಂದ್ರ ಸರ್ಕಾರ ಬಿಜೆಪಿಯದ್ದೆ ಇದೆ, ಬಾಂಗ್ಲಾದೇಶದ ಜತೆ ನನ್ನ ನಂಟಿದ್ದರೆ ತನಿಖೆ ಮಾಡಲಿ, ಎಳ್ಳಷ್ಟು ತಪ್ಪಿದ್ದರೂ ಶಿಕ್ಷೆ ಕೊಡಲಿ ಎಂದು ಸವಾಲು ಹಾಕಿದರು.
ರಾಜ್ಯಪಾಲರ ಬಗ್ಗೆ ನಾವು ಇಲ್ಲಿಯವರೆಗೆ ಮಾತನ್ನಾಡಿರಲಿಲ್ಲ. ಬಿಜೆಪಿಯ ಹೊಸ ಶಾಸಕರು ಸಿಎಂ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ, ಹಿರಿಯ ರಾಜಕಾರಣಿಗೆ ಏನೆಲ್ಲ ಮಾತನಾಡಿದ್ದಾರೆ ಎಂದು ನೋಡಲಿ. ಹಿಂದೂ- ಮುಸ್ಲಿಂ ದಂಗೆ ಏಳಿಸಬೇಕು ಅನ್ನೋದು ಅವರ ಚಿಂತನೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬುದು ನಮ್ಮ ಚಿಂತನೆ ಎಂದು ಹೇಳಿದರು.