

ಬೆಂಗಳೂರು: ಇಂಗ್ಲಿಷ್ ಕ್ಯಾಲೆಂಡರ್ ನ ಹೊಸ ವರ್ಷ 2024ಕ್ಕೆ ವೈಯಕ್ತಿಕವಾಗಿ ನನ್ನ ರೆಸ್ಯುಲೂಷನ್ ಏನೂ ಇಲ್ಲ. ಪಕ್ಷದ ಅನೇಕ ಹಿರಿಯ ನಾಯಕರು, ಶಾಸಕರ ಭಾವನೆ, ಪ್ರತಿನಿಧಿಸುತ್ತಿರುವ ಬೆಂಗಳೂರು ಉತ್ತರ ಲೋಕಸಭೆ ಕ್ಚೇತ್ರದ ಕಾರ್ಯಕರ್ತರ ಅಭಿಪ್ರಾಯ ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬುದಾಗಿದೆ. ಎಲ್ಲವೂ ಕಾಲ ಕೂಡಿ ಬಂದಾಗ ಪಕ್ಷ ತೀರ್ಮಾನಿಸುತ್ತದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಮೂರು ದಶಕಗಳ ಕಾಲ ಚುನಾವಣೆ ರಾಜಕೀಯದಲ್ಲಿರುವೆ. ಎಲ್ಲ ಹಂತದ ಹುದ್ದೆಗಳನ್ನು ನಿಭಾಯಿಸಿರುವೆ. ಕ್ಷೇತ್ರದ ಜನರ ಆಶೀರ್ವಾದ, ಕಾರ್ಯಕರ್ತರ ಪರಿಶ್ರಮ, ನಾಯಕರ ಬೆಂಬಲದಿಂದ ಸ್ಥಾನಮಾನ ಅನುಭವಿಸಿರುವೆ ಎಂದು ತೃಪ್ತಿ ವ್ಯಕ್ತಪಡಿಸಿದರು.
ಯುವಜನರು, ಹೊಸ ಮುಖಗಳಿಗೆ ಅವಕಾಶ ಕೊಡಬೇಕೆಂಬ ಕಾರಣಕ್ಕೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವೆ. ರಾಜಕಾರಣದಲ್ಲಿ ವೈಯಕ್ತಿಕ ನಿಲುವುಗಳು ಕೆಲವೊಮ್ಮೆ ಬದಲಾವಣೆ ಸಹಜ. ವಿವಿಧ ಕಾರಣಗಳಿಗೆ ಪಕ್ಷದಲ್ಲಿ ಮುನಿಸಿಕೊಂಡವರು, ಬೇಸರಗೊಂಡವರು ಕೂಡ ನಾನು ಮತ್ತೊಮ್ಮೆ ಸ್ಪರ್ಧಿಸಬೇಕು ಎಂದು ಬಯಸುತ್ತಿದ್ದು, ಎಲ್ಲರ ಪ್ರೀತಿ-ವಿಶ್ವಾಸ ತೋರಿಸುತ್ತದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೇವಲ ಏಳು ತಿಂಗಳಲ್ಲಿ ಆಡಳಿತ ಕುಲಗೆಡಿಸಿದೆ. ಅಭಿವೃದ್ಧಿ ಹಳಿ ತಪ್ಪಿದೆ, ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸ್ಪಂದಿಸುತ್ತಿಲ್ಲ. ಈ ಸಂದರ್ಭದಲ್ಲಿ ಪ್ರತಿಪಕ್ಷದ ಜವಾಬ್ದಾರಿ ಹೆಚ್ಚಿದೆ. ಸಮಗ್ರ ಅಧ್ಯಯನ, ವಸ್ತುಸ್ಥಿತಿ ಮಾಹಿತಿಯನ್ನು ಜನರ ಮುಂದಿಡುವ ಮೂಲಕ ಸರ್ಕಾರದ ವೈಫಲ್ಯ ಎತ್ತಿ ತೋರಿಸಬೇಕು. ಜತೆಗೆ ಆಡಳಿತ ಪಕ್ಷವೂ ಒಪ್ಪಿ ತನ್ನ ತಪ್ಪು ತಿದ್ದಿಕೊಳ್ಳುವಂತೆ ಮಾಡಬೇಕು ಎಂದು ಡಿ.ವಿ.ಸದಾನಂದಗೌಡ ಸಲಹೆ ನೀಡಿದರು.