

ಹೈದರಾಬಾದ್: ಸಿನಿ ದುನಿಯಾದಲ್ಲಿ ಭರ್ಜರಿಯಾಗಿ ಸದ್ದು ಮಾಡಿದ್ದ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಸಿನಿಮಾ ಮತ್ತೊಮ್ಮೆ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಟಾಲಿವುಡ್ ಯುವ ನಿರ್ದೇಶಕ ವೆಂಕಟೇಶ್ ಮಹಾ ಅವರು ಕೆಜಿಎಫ್ ಸಿನಿಮಾ ಕುರಿತು ಆಡಿರುವ ಮಾತುಗಳು ನಟ ಯಶ್ ಮತ್ತು ಕೆಜಿಎಫ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೆಂಕಟೇಶ್ ವಿರುದ್ಧ ಹರಿಹಾಯ್ದಿರುವ ಯಶ್ ಅಭಿಮಾನಿಗಳು ಕ್ಷಮೆ ಕೋರುವಂತೆ ಆಗ್ರಹಿಸುತ್ತಿದ್ದಾರೆ. ಆದರೆ, ವೆಂಕಟೇಶ್ ಕ್ಷಮೆ ಕೋರಲು ನಿರಾಕರಿಸಿದ್ದಾರೆ.
ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ವೆಂಕಟೇಶ್ ಮಹಾ ನೀಡಿದ್ದ ಹೇಳಿಕೆಯೇ ಭಾರೀ ವಿವಾದಕ್ಕೆ ಕಾರಣವಾಗಿದೆ. ಕೆಜಿಎಫ್ ಸಿನಿಮಾದಲ್ಲಿ ನಾಯಕನ ಪಾತ್ರವನ್ನು ಟಾರ್ಗೆಟ್ ಮಾಡಿರುವ ವೆಂಕಟೇಶ್, ನಾಯಕ ಓರ್ವ ಸ್ವಾರ್ಥಿ ಎಂದಿದ್ದಾರೆ. ತನ್ನೊಂದಿಗೆ ಇದ್ದ ಜನರಿಗೆ ಏನನ್ನೂ ನೀಡದೇ ಎಲ್ಲ ಸಂಪತ್ತನ್ನು ತನ್ನೊಂದಿಗೆ ತೆಗೆದುಕೊಂಡು ತಾನು ಕೂಡ ಸಮುದ್ರ ಪಾಲಾಗುತ್ತಾನೆ. ಆತ ತುಂಬಾ ಸ್ವಾರ್ಥಿ ಎಂದು ಸಂದರ್ಶನದಲ್ಲಿ ವೆಂಕಟೇಶ್ ಆಡಿರುವ ಮಾತು ಯಶ್ ಅಭಿಮಾನಿಗಳನ್ನು ಕೆರಳಿಸಿದ್ದು, ಜಾಲತಾಣದಲ್ಲಿ ವೆಂಕಟೇಶ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಟ್ರೆಂಡ್ ಕೂಡ ಮಾಡಿದ್ದರು.
ಇದೀಗ ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಪ್ರತಿಕ್ರಿಯೆ ನೀಡಿರುವ ವೆಂಕಟೇಶ್ ಮಹಾ, ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ನಾನು ಬಳಸಿರುವ ಭಾಷೆ ಕೆಟ್ಟದಿರಬಹುದು ಆದರೆ, ನನ್ನ ಅಭಿಪ್ರಾಯದಲ್ಲಿ ಯಾವುದೇ ಕೆಟ್ಟದು ಇರಲಿಲ್ಲ. ಹೀಗಾಗಿ ನಾನು ನನ್ನ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ನಾನು ಸಂದರ್ಶನದಲ್ಲಿ ಆಡಿದ ಮಾತುಗಳು ನನ್ನದಲ್ಲ. ಅದು ಕೆಲವರ ಅಭಿಪ್ರಾಯವಾಗಿದೆ. ನನ್ನ ಸಿನಿಮಾಗಳನ್ನು ಇಷ್ಟಪಟ್ಟವರು ಮತ್ತು ಇತರರು ನನಗೆ ಸಂದೇಶಗಳನ್ನು ಕಳುಹಿಸಿದ್ದಾರೆ. ಅವರೆಲ್ಲರ ಪರವಾಗಿ ಸಂದರ್ಶನದಲ್ಲಿ ನಾನು ಮಾತನಾಡಿದ್ದೇನೆ. ನಾನು ಮಾತನಾಡುವ ಭಾಷೆ ಸರಿಯಿಲ್ಲದಿರಬಹುದು ಅದಕ್ಕೆ ನಾನು ಕ್ಷಮೆ ಕೋರುತ್ತೇನೆ. ಆದರೆ ಆ ಸಮಯದಲ್ಲಿ ಚರ್ಚಿಸಿದ ವಿಷಯದ ಬಗ್ಗೆ ನನ್ನ ಅಭಿಪ್ರಾಯವನ್ನು ಬದಲಾಯಿಸುವುದಿಲ್ಲ. ನನ್ನ ಅಭಿಪ್ರಾಯದಲ್ಲಿ ಇದೊಂದು ಸಮಸ್ಯಾತ್ಮಕ ಪಾತ್ರವೆಂದು ತೋರುತ್ತದೆ. ಹೀಗಾಗಿ ನಾನು ಮಾತನಾಡಿದೆ. ಇದು ಯಾವುದೇ ವ್ಯಕ್ತಿ ಅಥವಾ ಸೃಜನಶೀಲ ವ್ಯಕ್ತಿಯನ್ನು ನೇರವಾಗಿ ಉದ್ದೇಶಿಸಿಲ್ಲ. ಒಬ್ಬ ವ್ಯಕ್ತಿಗೆ ಅದನ್ನು ಆರೋಪಿಸುವುದು ನನ್ನ ಅಭಿಪ್ರಾಯವನ್ನು ನೀವು ನೋಡುವ ರೀತಿಯ ಮೇಲೆ ಅವಲಂಬಿತವಾಗಿದೆ. ಸಮಸ್ಯೆ ನಿಮ್ಮಲ್ಲಿಯೇ ಇದೆ ಎಂದು ವೆಂಕಟೇಶ್ ಮಹಾ ಸಮರ್ಥನೆ ನೀಡಿದ್ದಾರೆ.
ನಾನು ಕಾಲ್ಪನಿಕ ಪಾತ್ರವನ್ನು ಅವಮಾನಿಸಿದೆ. ಅದಕ್ಕಾಗಿ ರಿಯಲ್ ಕ್ಯಾರೆಕ್ಟರ್ ಆಗಿರುವ ನನ್ನ ಮೇಲೆ ಹಲವು ರೀತಿಯಲ್ಲಿ ನಿಂದಿಸಲಾಗುತ್ತಿದೆ. ನನ್ನ ಬಗ್ಗೆ ಅಸಭ್ಯ ಚಿತ್ರಗಳನ್ನು ರಚಿಸಲಾಗುತ್ತಿದೆ. ಇದೇನು ಹೊಸದಲ್ಲ. ಇದನ್ನು ನಾವು ಹಲವು ಬಾರಿ ನೋಡಿದ್ದೇವೆ. ನನ್ನ ಅಭಿಪ್ರಾಯವನ್ನು ಗೌರವಿಸಲಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ವೆಂಕಟೇಶ್ ಮಹಾ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶಗಳಿಗೆ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)