

ಬೆಂಗಳೂರು: ನಮ್ಮ ಸಹೋದರ ಡಿ.ಕೆ.ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗುತ್ತಾರೆ, ಇಲ್ಲದಿದ್ದರೆ ಇಲ್ಲ. ಅದಕ್ಕೆ ಏಕೆ ತಲೆಕೆಡಿಸಿಕೊಳ್ಳಬೇಕು" ಎಂದು ಮಾಜಿ ಸಂಸದ DK Suresh ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಬುಧವಾರ ಮಾತನಾಡಿದರು. ಸಹೋದರನ ರಾಜಕೀಯ ಭವಿಷ್ಯ ಬದಲಾಗಲಿದೆ ಹಾಗೂ ಅಣ್ಣನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಆಸೆಯಿದೆ ಎನ್ನುವ ಹಿಂದಿನ ಹೇಳಿಕೆ ಬಗ್ಗೆ ಕೇಳಿದಾಗ, "ಆಸೆಯಿದೆ ಎಂದು ಹೇಳಿದ್ದೆ. ಅವರ ಹಣೆಯಲ್ಲಿ ಬರೆದಿದ್ದರೆ ಅದು ಆಗುತ್ತದೆ, ಇಲ್ಲದಿದ್ದರೆ ಇಲ್ಲ. ಪಕ್ಷ ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ. ಪಕ್ಷದ ಅಧ್ಯಕ್ಷರಾಗಿ, ಡಿಸಿಎಂ ಆಗಿ ಪಕ್ಷದ ಏಳಿಗೆಗೆ, ಘನತೆಗೆ ಚ್ಯುತಿ ಬರದಂತೆ ಅವರು ನಡೆದುಕೊಳ್ಳುತ್ತಿದ್ದಾರೆ" ಎಂದರು.
ಪಕ್ಷನಿಷ್ಠರಾಗಿ ಡಿ.ಕೆ. ಶಿವಕುಮಾರ್ ನಡೆದುಕೊಳ್ಳುತ್ತಿದ್ದಾರೆ. ಅವರು ನವೆಂಬರ್ ಕ್ರಾಂತಿ ವಿಚಾರದ ಬಗ್ಗೆ ಅವರು ಗಮನ ಹರಿಸುತ್ತಿಲ್ಲವಲ್ಲ ಎಂದು ಕೇಳಿದಾಗ, "ಪಕ್ಷದ ಅಧ್ಯಕ್ಷರಾಗಿ ಎಲ್ಲರನ್ನೂ ಸಮಾನವಾಗಿ ನೋಡಬೇಕಿರುವುದು ಅವರ ಕರ್ತವ್ಯ" ಎಂದು ಹೇಳಿದರು.
ನವೆಂಬರ್ 15 ರ ನಂತರ ಏನಾದರೂ ಬದಲಾವಣೆ ಆಗುತ್ತದೆಯೇ ಎಂದು ಕೇಳಿದಾಗ, "ನನಗೆ ನವೆಂಬರ್ ಎಂದರೆ ಕನ್ನಡ ರಾಜ್ಯೋತ್ಸವ ನೆನಪಾಗುತ್ತದೆ. ನಾವು, ನೀವೆಲ್ಲರೂ ಸೇರಿ ಈ ಹಬ್ಬವನ್ನು ಆಚರಣೆ ಮಾಡೋಣ. ಮಿಕ್ಕ ವಿಚಾರಗಳ ಬಗ್ಗೆ ನನಗೆ ತಿಳಿದಿಲ್ಲ. ಈ ಪ್ರಶ್ನೆಯನ್ನು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಯವರು, ಎಐಸಿಸಿ ನಾಯಕರಿಗೆ ಕೇಳಬೇಕು"ಎಂದರು.
2028 ರ ಚುನಾವಣೆಗೂ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಬಗ್ಗೆ ಕೇಳಿದಾಗ, "ರಾಜಕೀಯದಲ್ಲಿ 95-98 ವರ್ಷ ಆದವರೂ ಇದ್ದಾರೆ. ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತೇನೆ ಎನ್ನುವುದರಲ್ಲಿ ಯಾವ ತಪ್ಪೂ ಇಲ್ಲ. ಅವರು ನಮ್ಮ ನಾಯಕರು. ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸುತ್ತೇವೆ" ಎಂದರು.
"ಒಬ್ಬ ನಾಯಕನಿಗೆ ಇರಬೇಕಾದ ಎಲ್ಲಾ ಅವಕಾಶಗಳು ಅವರಿಗಿದೆ. ಎಲ್ಲರಿಗಿಂತ ಗಟ್ಟಿಯಾಗಿ, ಚೆನ್ನಾಗಿ ಓಡಾಡುತ್ತಿದ್ದಾರೆ. ದಿನನಿತ್ಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಉತ್ತಮವಾಗಿ ಆಡಳಿತ ನಡೆಯುತ್ತಿದೆ. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದರಲ್ಲಿ ತಪ್ಪೇನಿಲ್ಲ" ಎಂದರು.