Rahul Gandhi Speech: ತಾಯಿ ಸೋನಿಯಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿ ನಡುವಿನ ಪ್ರೀತಿಯ ಸಂಬಂಧವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾವುಕವಾಗಿ ಸ್ಮರಿಸಿದ್ದಾರೆ. "ನನ್ನ ತಾಯಿ ನನ್ನ ತಂದೆಗೆ ಸೇರಿದವರು, ನನ್ನ ತಂದೆಯೂ ಅವರಿಗೇ ಸೇರಿದವರು" ಎಂದು ಹೇಳುವ ಮೂಲಕ ಪೋಷಕರ ನಡುವಿನ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ.
ಸೋಮವಾರ ನವದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬೆಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ತಂದೆ-ತಾಯಿಯ ಪ್ರೇಮಕಥೆಯ ಹಲವು ನೆನಪುಗಳನ್ನು ಹಂಚಿಕೊಂಡರು.
ಕೇಂಬ್ರಿಡ್ಜ್ನ ವರ್ಸಿಟಿ ರೆಸ್ಟೋರೆಂಟ್ನಲ್ಲಿ ರಾಜೀವ್ ಮತ್ತು ಸೋನಿಯಾ ಮೊದಲ ಬಾರಿ ಭೇಟಿಯಾಗಿದ್ದರು. ಹಲವು ವರ್ಷಗಳ ನಂತರ ತಾವು ಕೂಡ ಗೆಳತಿಯೊಂದಿಗೆ ಅದೇ ರೆಸ್ಟೋರೆಂಟ್ಗೆ ಹೋಗಿದ್ದನ್ನು ರಾಹುಲ್ ನೆನಪಿಸಿಕೊಂಡರು. ಅಲ್ಲಿ ರೆಸ್ಟೋರೆಂಟ್ನ ಸಿಬ್ಬಂದಿ ತಮ್ಮ ತಂದೆ-ತಾಯಿಯನ್ನು ಗುರುತಿಸಿದ್ದ ಪ್ರಸಂಗವನ್ನೂ ವಿವರಿಸಿದರು.
ತಮ್ಮ ತಂದೆ-ತಾಯಿ ಸದಾ ಒಟ್ಟಿಗೆ ಇರುತ್ತಿದ್ದರು. ಊಟದ ಸಮಯದಲ್ಲೂ ತಂದೆಯ ಮಡಿಲಲ್ಲಿ ತಾಯಿ ಕುಳಿತಿರುತ್ತಿದ್ದರು. ಇದನ್ನೇ ಸಹಜವೆಂದು ಭಾವಿಸಿದ್ದ ತಮಗೆ, ಸ್ನೇಹಿತರ ಮನೆಗೆ ಹೋದಾಗ ಅವರ ತಂದೆ-ತಾಯಿ ಹಾಗೆ ಕುಳಿತುಕೊಳ್ಳದಿರುವುದು ಆಶ್ಚರ್ಯ ಮೂಡಿಸುತ್ತಿತ್ತು ಎಂದು ರಾಹುಲ್ ಹೇಳಿದರು.
ಆದರೆ ಇಂತಹ ಸುಂದರ ಕುಟುಂಬ ಜೀವನಕ್ಕೆ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಗಳ ಬಳಿಕ ದೊಡ್ಡ ಆಘಾತ ಎದುರಾಯಿತು. ತಂದೆಯ ಸಾವಿನ ನಂತರ ತಾಯಿ ಸೋನಿಯಾ ಅವರ ಜೀವನವೇ ಬದಲಾಯಿತು. ಹಿಂದೆ ಸದಾ ನಗುತ್ತಾ, ಎಲ್ಲರೊಂದಿಗೆ ಬೆರೆಯುತ್ತಿದ್ದ ತಾಯಿ ಮೌನಿಯಾದರು ಎಂದು ಭಾವುಕರಾಗಿ ಹೇಳಿದರು.
ತಂದೆಯ ಸಾವಿನ ಸಂದರ್ಭದ ನೆನಪುಗಳು ಸೋನಿಯಾ ಅವರಿಗೆ ಸರಿಯಾಗಿ ನೆನಪಿಲ್ಲ. ಆ ಘಟನೆಗೆ ಸಂಬಂಧಿಸಿದ ವಿವರಗಳನ್ನು ತಮ್ಮ ಸಹೋದರಿ ಪ್ರಿಯಾಂಕಾ ಮತ್ತು ತಾಯಿ ಸೇರಿ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದು ರಾಹುಲ್ ತಿಳಿಸಿದರು.
ಭಾರತದ ಜನರು ಕಷ್ಟದ ಸಮಯದಲ್ಲಿ ಸೋನಿಯಾ ಗಾಂಧಿಗೆ ಬೆಂಬಲವಾಗಿ ನಿಂತರು. ವಿಶೇಷವಾಗಿ ಗ್ರಾಮೀಣ ಭಾಗದ ಜನರು ಅವರನ್ನು ತಮ್ಮವರಂತೆ ಸ್ವೀಕರಿಸಿದರು ಎಂದು ಹೇಳಿದರು.
ಇದೇ ವೇಳೆ, ಸೋನಿಯಾ ಗಾಂಧಿ ನಾಲ್ಕು ಬಾರಿ ಕ್ಯಾನ್ಸರ್ನಿಂದ ಚೇತರಿಸಿಕೊಂಡಿದ್ದಾರೆ ಎಂದು ರಾಹುಲ್ ಬಹಿರಂಗಪಡಿಸಿದರು. ತಮ್ಮ ಜೀವನದಲ್ಲಿ ತಾಯಿ ಹೆದರಿದ್ದನ್ನು ಅಥವಾ ಧೈರ್ಯ ಕಳೆದುಕೊಂಡಿದ್ದನ್ನು ತಾವು ಎಂದಿಗೂ ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಟೇಕಾಫ್ಗೂ ಮುನ್ನವೇ ತಾಂತ್ರಿಕ ದೋಷ ಪತ್ತೆ! ಮಂಗಳೂರು ಏರ್ಪೋರ್ಟ್ನಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ
ಹಾರ್ಪರ್ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ 'ಬೆಲಾಂಗಿಂಗ್' ಪುಸ್ತಕ ನವೆಂಬರ್ 10ರಂದು ಬಿಡುಗಡೆಯಾಗಿದೆ. ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗವಹಿಸಿದ್ದರು. (ಏಜೆನ್ಸೀಸ್)