

ಜೋಹಾನ್ಸ್ಬರ್ಗ್: ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದವರು ಭಾರತಾದ್ಯಂತ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಈ ಸಭೆಯಲ್ಲಿ ಭಾಗವಹಿಸಿದ್ದ ದಕ್ಷಿಣ ಆಫ್ರಿಕಾದ ವೃದ್ಧನೊಬ್ಬ ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾನೆ.
ಮೌಲಾನಾ ಯೂಸುಫ್ ತೂತ್ಲಾ (80) ಎಂಬ ವೃದ್ಧ ಮಾರ್ಚ್ 1ರಿಂದ 15 ರವರೆಗೆ ನಡೆದ ಸಭೆಯಲ್ಲಿ ಭಾಗಿಯಾಗಿದ್ದ. ಸಭೆ ಮುಗಿಸಿ ಬಂದ ನಂತರ ಸೋಂಕಿನ ಬಗ್ಗೆ ತನ್ನ ಕುಟುಂಬದವರ ಜತೆ ಪ್ರತಿಕ್ರಿಯಿಸಿದ್ದ ಆತ ‘ನನ್ನ ಹಣೆ ಬರಹವನ್ನು ಅಲ್ಲಾಹ್ ನಿರ್ಧರಿಸುತ್ತಾನೆ. ನನ್ನನ್ನು ಯಾವಾಗ ಕರೆಸಿಕೊಳ್ಳಬೇಕು ಎಂದು ಆತನಿಗೆ ಚೆನ್ನಾಗಿ ಗೊತ್ತಿದೆ’ ಎಂದು ಹೇಳಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ಸೋಂಕು ದೃಢಪಟ್ಟ ನಂತರ ಮೌಲಾನಾ ಚಿಕಿತ್ಸೆ ಪಡೆಯುತ್ತಿದ್ದ. ಆರಂಭದಲ್ಲಿ ಗುಣಮುಖನಾದಂತೆ ಕಂಡುಬಂದರೂ ನಂತರ ಏಕಾಏಕಿಯಾಗಿ ಜ್ವರ ಹೆಚ್ಚಾಗಿ ಮೃತಪಟ್ಟಿದ್ದಾನೆ. ‘ಭಾರತಕ್ಕೆ ಈ ಸಮಯದಲ್ಲಿ ಹೋಗದಂತೆ ಎಷ್ಟು ಹೇಳಿದರೂ ಆತ ಕೇಳಲಿಲ್ಲ. ಭಾರತ ಮಾತ್ರವಲ್ಲದೇ, ಇಂಥ ಸಭೆ ನಡೆದ ವಿವಿಧ ದೇಶಗಳಿಗೂ ಈತ ಭೇಟಿಯಾಗಿದ್ದಾನೆ’ ಎಂದು ಕುಟುಂಬಸ್ಥರು ಹೇಳಿರುವುದು ವೈರಸ್ ಹರಡುವಿಕೆ ಕುರಿತಂತೆ ಇನ್ನೂ ಹೆಚ್ಚಿನ ಆತಂಕ ಸೃಷ್ಟಿಸಿದೆ.
ಸಭೆಯಲ್ಲಿ ಭಾಗವಹಿಸಿರುವವರಿಗಾಗಿ ಇತ್ತ ಭಾರತದಲ್ಲಿಯೂ ವ್ಯಾಪಕವಾದ ಶೋಧ ನಡೆದಿರುವ ಬೆನ್ನಲ್ಲೇ, ಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದ ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಥಾಯ್ಲೆಂಡ್, ನೇಪಾಳ, ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ, ಕಿರ್ಜಿಗಿಸ್ತಾನ್ನಲ್ಲಿಯೂ ಆತಂಕ ಸೃಷ್ಟಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಈ ಸೋಂಕಿನಿಂದ 9 ಮಂದಿ ಮೃತಪಟ್ಟಿದ್ದು, 1,585 ಮಂದಿಗೆ ಸೋಂಕು ದೃಢಪಟ್ಟಿದೆ. (ಏಜೆನ್ಸೀಸ್)