

ಮೀರತ್: ಕಿಡಿಗೇಡಿಯೊಬ್ಬ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಸಂದರ್ಭದಲ್ಲಿ ಮಂಗಗಳ ಹಿಂಡು ಮಧ್ಯಪ್ರವೇಶಿಸಿ ಬಾಲಕಿಯನ್ನು ರಕ್ಷಣೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಕಳೆದ ಶನಿವಾರ ಅಪರಿಚಿತ ವ್ಯಕ್ತಿಯೊಬ್ಬ ಬಾಲಕಿಗೆ ಆಮಿಷವೊಡ್ಡಿ ಪಾಳುಬಿದ್ದ ಮನೆಗೆ ಕೊರೆದೊಯ್ದಿದ್ದಾನೆ. ಬಳಿಕ ಬಾಲಕಿಯ ಬಟ್ಟೆಯನ್ನು ತೆಗೆದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸುವಾಗ ಅಲ್ಲಿಯೇ ಇದ್ದ ಕೆಲವು ಮಂಗಗಳು ಆತನ ಮೇಲೆ ದಾಳಿ ನಡೆಸಿವೆ. ಪರಿಣಾಮ ಆರೋಪಿ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಮಂಗಗಳ ದಯೆಯಿಂದ ಬಚಾವ್ ಆಗಿ ಮನೆಗೆ ಬಂದ ಬಾಲಕಿ ತನ್ನ ಪಾಲಕರ ಮುಂದೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಮಂಗಗಳು ಹಿಂಡು ತನ್ನನ್ನು ರಕ್ಷಣೆ ಮಾಡಿದ್ದಾಗಿ ಹೇಳಿದ್ದಾಳೆ. ಇದೀಗ ಬಾಲಕಿಯ ಪಾಲಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಆರೋಪಿಯ ಗುರುತು ಇನ್ನು ಪತ್ತೆಯಾಗಿಲ್ಲ. ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆ ಬಗ್ಗೆ ಬಾಲಕಿಯ ತಂದೆ ಮಾತನಾಡಿದ್ದು, ಕಿಡಿಗೇಡಿ ನನ್ನ ಮಗಳನ್ನು ಹೊತ್ತೊಯ್ಯುವ ಸಂದರ್ಭದಲ್ಲಿ ಆಕೆ ಮನೆಯ ಹೊರಗಡೆ ಆಟವಾಡುತ್ತಿದ್ದಳು. ಆತ ನನ್ನ ಮಗಳ ಪಕ್ಕದಲ್ಲೇ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಕೊಲೆ ಮಾಡುವುದಾಗಿ ತನ್ನ ಮಗಳಿಗೆ ಬೆದರಿಕೆ ಹಾಕಿದ್ದನು. ಮಂಗಗಳ ಹಿಂಡು ಮಧ್ಯಪ್ರವೇಶ ಮಾಡದೇ ಹೋಗಿದ್ದರೆ ನನ್ನ ಮಗಳು ಸಾವಿಗೀಡಾಗುತ್ತಿದ್ದಳು ಎಂದಿದ್ದಾರೆ.
ಬಾಗ್‌ಪತ್ ಸರ್ಕಲ್ ಇನ್ಸ್ಪೆಕ್ಟರ್ ಹರೀಶ್ ಭಡೋರಿಯಾ ಮಾತನಾಡಿ, ಮಂಗಗಳ ಹಿಂಡು ಬಾಲಕಿಯನ್ನು ರಕ್ಷಣೆ ಮಾಡಿದ ಘಟನೆಯ ಬಗ್ಗೆ ಕೇಳಿದ್ದೇವೆ. ದೂರು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಆರೋಪಿಯನ್ನು ಗುರುತಿಸಲು ಮತ್ತು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ. (ಏಜೆನ್ಸೀಸ್)