

ಕೋಲ್ಕತಾ: ನವರಾತ್ರಿ ಸಂಭ್ರಮ ಈಗಾಗಲೇ ಆರಂಭವಾಗಿದೆ. ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಈ ಹಬ್ಬವನ್ನು ಪಶ್ಚಿಮ ಬಂಗಾಳದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಬಂಗಾಳಿಗಳ ಪ್ರಸಿದ್ಧ ಹಬ್ಬವಾದ ದುರ್ಗಾಪೂಜೆ(Durga Puja) ಸಮಯದಲ್ಲಿ ದುರ್ಗಾದೇವಿಯ ದೊಡ್ಡ ಪ್ರತಿಮೆಗಳು ಮತ್ತು ಭವ್ಯವಾದ ಪಾಂಡಲ್ಗಳನ್ನು ಅಲಂಕರಿಸಲಾಗುತ್ತದೆ. ಅದರ ಜತೆಗೆ ವಿವಿಧ ರೀತಿಯ ಭಕ್ಷ್ಯಗಳನ್ನು ಸಹ ತಯಾರಿಸಲಾಗುತ್ತದೆ.
ಹಬ್ಬದ ಸಂದರ್ಭದಲ್ಲಿ ಕೈದಿಗಳು ಆಹಾರದ ಮೆನುವನ್ನು ಬದಲಾಯಿಸುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡುತ್ತಾರೆ. ಆದ್ದರಿಂದ ಷಷ್ಠಿಯಿಂದ ದಶಮಿಯವರೆಗೆ (ದುರ್ಗಾ ಪೂಜೆಯ ಆರಂಭ ಮತ್ತು ಅಂತ್ಯ), ಜೈಲು ಅಧಿಕಾರಿಗಳು ಕೈದಿಗಳ ಆಹಾರದಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಾರೆ. ಹಬ್ಬದ ಸೀಸನ್‌ಗೆ ಕೆಲವು ತಿಂಗಳುಗಳ ಮೊದಲು ಆಹಾರದ ಸ್ವಲ್ಪ ಭಾಗವನ್ನು ಉಳಿಸುವ ಮೂಲಕ ಇದನ್ನು ಮಾಡಲಾಗುತ್ತದೆ. ಇದರಿಂದಾಗಿ ಯಾವುದೇ ಹೆಚ್ಚುವರಿ ವೆಚ್ಚಗಳು ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಅಕ್ಟೋಬರ್ 9 ರಿಂದ ಅಕ್ಟೋಬರ್ 12ರವರೆಗೆ ಈ ನಾಲ್ಕು ದಿನದಂದು ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ವಿಶೇಷ ಖಾದ್ಯಗಳನ್ನು ತಯಾರಿಸಿ ಕೈದಿಗಳು ಹಾಗೂ ವಿಚಾರಣಾಧೀನ ಕೈದಿಗಳಿಗೆ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ದುರ್ಗಾ ಪೂಜೆಯ ನಿಮಿತ್ತ ಪಶ್ಚಿಮ ಬಂಗಾಳದ ಕೈದಿಗಳಿಗಾಗಿ ವಿಶೇಷ ಮೆನುವನ್ನು ಸಿದ್ಧಪಡಿಸಲಾಗಿದೆ. ಮಚ್ಚೆರ್ ಮಾತಾ ದಿಯೆ ಪುಯಿ ಶಾಕ್ (ಮೀನಿನ ಮಲಬಾರ್ ಪಾಲಕ), ಮಚೇರ್ ಮಾತಾ ದಿಯೆ ದಾಲ್ (ಮೀನಿನ ಬೆಂಗಾಲಿ ಮೂಂಗ್ ದಾಲ್), ಲುಚಿ ಚೋಲಾರ್ ದಾಲ್ (ಬಂಗಾಳಿ ಚನಾ ದಾಲ್ ಪುರಿ), ಪಾಯೇಶ್ (ಖೀರ್), ಚಿಕನ್ ಕರಿ, ಆಲೂ ಪೊಟೋಲ್ ಚಿಂಗ್ರಿ ( ಪರ್ವಾಲ್ ಮತ್ತು ಆಲೂಗಡ್ಡೆಗಳೊಂದಿಗೆ ಬೆಂಗಾಲಿ ಸೀಗಡಿಗಳು, ರೈತಾದೊಂದಿಗೆ ಮಟನ್ ಬಿರಿಯಾನಿ, ಬಸಂತಿ ಪುಲಾವ್ (ಗೋಡಂಬಿ ಮತ್ತು ಒಣದ್ರಾಕ್ಷಿಗಳೊಂದಿಗೆ ತುಪ್ಪ ನೆನೆಸಿದ ಸಿಹಿ ಹಳದಿ ಪುಲಾವ್) ಅನ್ನು ತಯಾರಿಸಲಾಗುತ್ತದೆ.
ಧಾರ್ಮಿಕ ಭಾವನೆಗಳನ್ನು ಗೌರವಿಸಲು ಮಾಂಸಾಹಾರವನ್ನು ಎಲ್ಲರಿಗೂ ನೀಡುವುದಿಲ್ಲ. ಕೈದಿಗಳು ತಮ್ಮ ಇಷ್ಟದ ಆಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಅವರ ದಿನಚರಿಯಲ್ಲಿ ಬದಲಾವಣೆ ತರಲು ನಾವು ಬಯಸುತ್ತೇವೆ. ಅವರ ದೈನಂದಿನ ಜೀವನದಿಂದ ಸ್ವಲ್ಪ ಪರಿಹಾರವನ್ನು ನೀಡುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೈಲು ಒಂದು ಸುಧಾರಣಾ ನೆಲೆಯಾಗಿದೆ. ಹಬ್ಬಗಳ ಮುನ್ನ ಕೈದಿಗಳು ನಮಗೆ ಉತ್ತಮ ಆಹಾರ ನೀಡುವಂತೆ ಪತ್ರ ಬರೆಯುತ್ತಾರೆ. ನಾವು ಈ ವರ್ಷ ಮೆನುವಿನೊಂದಿಗೆ ಸುಧಾರಣಾ ಪ್ರಕ್ರಿಯೆಯತ್ತ ಗಮನ ಹರಿಸುತ್ತೇವೆ. ಈ ಕೈದಿಗಳ ಮುಖದಲ್ಲಿ ನಗು ತರಿಸಲು ನಮ್ಮ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಬುರ್ದ್ವಾನ್ ಸೆಂಟ್ರಲ್ ಕರೆಕ್ಷನಲ್ ಹೋಮ್‌ನ ಹಿರಿಯ ಜೈಲು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. (ಏಜೆನ್ಸೀಸ್)