

ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಮೈದಾನದಲ್ಲಿ ತಾತ್ಕಾಲಿಕವಾಗಿ ವಾಹನಗಳ ನಿಲುಗಡೆ ನಿರ್ಬಂಧಿಸಿ ಮತ್ತು ಮೈದಾನ ರಕ್ಷಣೆ ಮಾಡುವಂತೆ ಒತ್ತಾಯಿಸಿ ಮರ್ಕಜ್ ಸುನ್ನಿ ಜಾಮಿಯಾ ಮಸ್ಜಿದ್ ನೇತೃತ್ವದಲ್ಲಿ ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಿಲಕ್‌ನಗರದ ಮೈದಾನ ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿ. ಮುನ್ಸಿಪಲ್ ಖಾತಾ ಹೊಂದಿದೆ. ಈ ಮೈದಾನವು ಗಾಂಧಿಬಜಾರ್‌ನ ಮರ್ಕಜಿ ಸುನ್ನಿ ಜಾಮಿಯಾ ಮಸೀದಿ ಅಧೀನದಲ್ಲಿದೆ. ಜಾಮಿಯಾ ಮಸೀದಿಯೇ ಮೈದಾನದ ನಿರ್ವಹಣೆ ಮಾಡಿಕೊಂಡು ಬಂದಿದೆ. ಆದರೆ ಇಲ್ಲಿ ಕೆಲವರು ಆನಧಿಕೃತವಾಗಿ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಕೆಲ ಕಿಡಿಗೇಡಿಗಳು ರಾತ್ರಿ ಹಾಗೂ ರಜೆ ದಿನಗಳಲ್ಲಿ ಅನೈತಿಕ ಚಟುವಟಿಕೆಯ ತಾಣವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಈ ಸ್ಥಳ ಮುಸ್ಲಿಮರಿಗೆ ಪವಿತ್ರ ಸ್ಥಳ. ಪ್ರತಿ ವರ್ಷ ಸ್ವಚ್ಛಗೊಳಿಸಲು ಲಕ್ಷಾಂತರ ರೂ. ವ್ಯಯವಾಗುತ್ತಿದೆ. ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಮಂಗಳವಾರ ಕೆಲವರು ಮೈದಾನದೊಳಗೆ ಅತಿಕ್ರಮಣ ಮಾಡಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇಲ್ಲಿ ಕಮಿಟಿಯು ಸಿಸಿ ಕ್ಯಾಮರಾ ಅಳವಡಿಸಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಿದೆ. ಜಿಲ್ಲಾಧಿಕಾರಿಯೇ ವಕ್ಫ್ ಸಂಸ್ಥೆಗಳ ಟಾಸ್ಕ್‌ಫೋರ್ಸ್ ಮುಖ್ಯಸ್ಥರಾಗಿದ್ದು, ಸಾರ್ವಜನಿಕ ವಾಹನ ನಿಲುಗಡೆ ಸ್ಥಗಿತಗೊಳಿಸಿ ಮೈದಾನಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದರು. ಮಸೀದಿ ಸಮಿತಿ ಅಧ್ಯಕ್ಷ ಮುನಾವರ್ ಪಾಷಾ, ಮುಖಂಡರಾದ ಎಂ.ಡಿ.ಶರೀಫ್, ಜಿಲಾನ್ ಖಾನ್, ಸೈಫುಲ್ಲಾ ಇಮ್ರಾನ್, ಇಮ್ರಾನ್, ಖಲೀಂ ಪಾಷಾ, ನಯಾಜ್‌ಅಹಮ್ಮದ್, ಆಸೀಫ್, ರಜಾಕ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.
ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಶಿವಮೊಗ್ಗದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಕಾನೂನಾತ್ಮಕವಾಗಿ ಪರಿಶೀಲನೆ ಮಾಡಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು. ಮೈದಾನದಲ್ಲಿ ಯಾವ ವಾಹನಗಳಿಗೂ ಸದ್ಯಕ್ಕೆ ಪ್ರವೇಶ ಇಲ್ಲ. -ಜಿ.ಕೆ.ಮಿಥುನ್‌ಕುಮಾರ್, ಎಸ್‌ಪಿ