ಭಾರತದ ಪೌರತ್ವಕ್ಕೆ ರೊಹಿಂಗ್ಯಾ ತಂತ್ರ

Rohingya
Published on

ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನಿನ (ಸಿಎಎ) ವಿರುದ್ಧ ದೇಶದ ಹಲವೆಡೆ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಮ್ಯಾನ್ಮಾರ್​ನ ರೊಹಿಂಗ್ಯಾ ಮುಸ್ಲಿಮರು ಈ ಕಾಯ್ದೆಯ ದುರುಪಯೋಗ ಮಾಡಿಕೊಂಡು ಭಾರತದ ಪೌರತ್ವ ಪಡೆಯಲು ಯೋಜನೆ ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

ಸಿಎಎಯನ್ನು ಸಂಸತ್ತು ಕಳೆದ ವರ್ಷ ಅಂಗೀಕರಿಸಿತ್ತು. ಈ ವರ್ಷ ಜನವರಿ 10ರಿಂದ ಅಸ್ತಿತ್ವಕ್ಕೆ ಬಂದಿರುವ ಸಿಎಎ ಪ್ರಕಾರ, ನೆರೆಯ ದೇಶಗಳಾದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮುಸ್ಲಿಮೇತರ ವಲಸಿಗರು ಭಾರತದ ಪೌರತ್ವಕ್ಕೆ ಅರ್ಜಿ ಹಾಕಲು ಅವಕಾಶವಿದೆ. ಹೀಗಾಗಿ ಕೆಲ ಮ್ಯಾನ್ಮಾರ್ ರೊಹಿಂಗ್ಯಾಗಳು, ಅಫ್ಘಾನಿಸ್ತಾನದ ಮುಸ್ಲಿಮರು ಕ್ರಿಶ್ಚಿಯನ್ ಹಾಗೂ ಯಹೂದಿ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಫ್ಘಾನಿಸ್ತಾನದ ಕನಿಷ್ಠ 25 ಮುಸ್ಲಿಮರು ಕ್ರೖೆಸ್ತ ಧರ್ಮಕ್ಕೆ ಮತಾಂತರವಾಗಿರುವ ಪ್ರಕರಣಗಳನ್ನು ಕೇಂದ್ರೀಯ ಸಂಸ್ಥೆಗಳು ಪತ್ತೆ ಮಾಡಿವೆ. ದಕ್ಷಿಣ ದೆಹಲಿಯಲ್ಲಿರುವ ಚರ್ಚ್​ನ ಮುಖ್ಯಸ್ಥ ಅದಿಬ್ ಅಹಮದ್ ಮ್ಯಾಕ್ಸ್​ವೆಲ್ ಹೇಳುವ ಪ್ರಕಾರ, ಸಿಎಎ ನಂತರದಲ್ಲಿ ಬಹಳಷ್ಟು ಆಫ್ಘನ್ ಮುಸ್ಲಿಮರು ಕ್ರೖೆಸ್ತ ಧರ್ಮಕ್ಕೆ ಸೇರಲು ಮುಂದಾಗುತ್ತಿದ್ದಾರೆ. ಮ್ಯಾಕ್ಸ್​ವೆಲ್ ತಂದೆ-ತಾಯಿ ಸುನ್ನಿ ಮುಸ್ಲಿಮರಾಗಿದ್ದು ಆಫ್ಘನ್ ರಾಜಧಾನಿ ಕಾಬೂಲ್ ಸಮೀಪ ನೆಲೆಸಿದ್ದಾರೆ. ಭಾರತಕ್ಕೆ ಅಕ್ರಮ ವಲಸೆ ಬಂದಿರುವ ಮುಸ್ಲಿಮರು ವಿಶ್ವಸಂಸ್ಥೆಯ ವಲಸಿಗರ ಕುರಿತ ಹೈ ಕಮಿಷನರ್ (ಯುಎನ್​ಎಚ್​ಸಿಆರ್) ಅನ್ವಯ ಆಶ್ರಯಕ್ಕೆ ಅರ್ಜಿ ಸಲ್ಲಿಸುತ್ತಾರೆ. ಮ್ಯಾನ್ಮಾರ್​ನ ರಾಖೈನ್ ಪ್ರಾಂತ್ಯದಲ್ಲಿ ನೆಲೆಸುವ ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್ ಸಶಸ್ತ್ರ ಪಡೆಗಳ ಕಿರುಕುಳ ತಾಳಲಾರದೆ 2011ರಿಂದ ಭಾರತಕ್ಕೆ ವಲಸೆ ಬರಲು ಆರಂಭಿಸಿದ್ದಾರೆ.

1.5 ಲಕ್ಷ ಆಫ್ಘನ್ ಮುಸ್ಲಿಮರು

ದೆಹಲಿಯಲ್ಲಿ ಅಂದಾಜು 1,50,000ದಿಂದ 1,60,000 ಆಫ್ಘನ್ ಮುಸ್ಲಿಮರಿದ್ದಾರೆ. ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಂದ ಅಪಹೃತನಾದ ಸಿಖ್ ವ್ಯಕ್ತಿ ನಿದಾನ್ ಸಿಂಗ್ ಸಚ್​ದೇವರ್​ನ್ನು ಹುಡುಕಿಕೊಡುವಲ್ಲಿ ದೆಹಲಿಯಲ್ಲಿ ನೆಲೆಸಿರುವ ಅಫ್ಘಾನ್ ಮುಸ್ಲಿಂ ಸಮುದಾಯ ನೆರವು ನೀಡಿತ್ತು.

ಗ್ರೀನ್​ಕಾರ್ಡ್​ಗೆ 195 ವರ್ಷ ಕಾಯಬೇಕು!

ವಾಷಿಂಗ್ಟನ್: ಅಮೆರಿಕದಲ್ಲಿ ಕಾಯಂ ಆಗಿ ನೆಲೆಸಲು ಬೇಕಾದ ಗ್ರೀನ್ ಕಾರ್ಡ್ ಪಡೆಯಲು ಭಾರತೀಯರು 195 ವರ್ಷಕ್ಕಿಂತ ಹೆಚ್ಚು ಕಾಲ ಕಾಯಬೇಕಾಗಿದೆ ಎಂದು ರಿಪಬ್ಲಿಕನ್ ಸೆನೆಟರ್ ಮೈಕ್ ಲೀ ಹೇಳಿದ್ದಾರೆ. ಈ ಬ್ಯಾಕ್​ಲಾಗ್ ಸಮಸ್ಯೆ ಪರಿಹಾರಕ್ಕೆ ಒಂದು ಕಾನೂನು ರೂಪಿಸುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ಪ್ರಸ್ತುತ ಇರುವ ಗ್ರೀನ್​ಕಾರ್ಡ್ ನೀತಿಯಿಂದ ವಲಸಿಗರ ಮಕ್ಕಳಿಗೆ ಯಾವುದೇ ಪ್ರಯೋಜನವಿಲ್ಲ. ಅವರ ಗ್ರೀನ್ ಕಾರ್ಡ್ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಭಾರತದಿಂದ ಬ್ಯಾಕ್​ಲಾಗ್ ಪ್ರವೇಶಿಸುವ ವ್ಯಕ್ತಿ ಇಬಿ-3 ಗ್ರೀನ್ ಕಾರ್ಡ್ ಹೊಂದಲು 195 ವರ್ಷ ಕಾಯಬೇಕಾಗಬಹುದು. ಒಂದು ವೇಳೆ ಅವರ ಮಕ್ಕಳಿಗೆ ಈ ಸ್ಥಿತಿ ಬಂದಲ್ಲಿ ಅವರಲ್ಲಿ ಯಾರೂ ಅಮೆರಿಕದ ಪ್ರಜೆಯಾಗಲು ಸಾಧ್ಯವಿಲ್ಲ ಎಂದು ಸೆನೆಟ್​ನಲ್ಲಿ ಅಭಿಪ್ರಾಯಪಟ್ಟರು. ಗ್ರೀನ್ ಕಾರ್ಡ್ ಬ್ಯಾಕ್​ಲಾಗ್​ನಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ವಿುಕರು ರಕ್ಷಣೆಗಾಗಿ ಮಂಡಿಸಲಾಗಿರುವ ಮಸೂದೆಯೊಂದರ ಮೇಲೆ ಮಾತನಾಡುವಾಗ ಅವರು ತಮ್ಮ ಆತಂಕ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net