

ಮದುವೆಯಾಗಿ 13 ವರ್ಷಗಳಾಗಿವೆ. ಎಂಟು ವರ್ಷದ ಮಗಳಿದ್ದಾಳೆ. ನಾನು ಡಬಲ್ ಗ್ರಾಜುಯೇಟ್. ನನ್ನ ಗಂಡ ನನ್ನನ್ನು ಇಷ್ಟ ಪಟ್ಟು ಮದುವೆ ಆಗಿದ್ದರು. ನನ್ನ ತಾಯಿ ವಿಧವೆ. ಅವರೂ ನಮ್ಮ ಜತೆ ಇರಲು ಮನೆಯವರು ಒಪ್ಪಿದರು. ಆ ಒಂದೇ ಕಾರಣಕ್ಕೆ ಅವರ ಕಿರುಕುಳ ಹೆಚ್ಚುತ್ತಾ ಬಂದಿದೆ. ಮನೆಯಿಂದಲೇ ಅವರು ಕೆಲಸ ಮಾಡುತ್ತಿದ್ದು, ಎರಡು ಲಕ್ಷದವರೆಗೆ ಸಂಬಳ ಬರುತ್ತಿದೆ. ಆದರೆ ಒಂದು ರೂಪಾಯಿನೂ ಕೊಡಲ್ಲ. ತನ್ನ ಮಾತೇ ನಡೆಯಬೇಕು ಎನ್ನುತ್ತಾರೆ. ನಮ್ಮ ತಾಯಿಯ ಮೇಲೂ ಕೈಮಾಡುತ್ತಾರೆ. ನನ್ನನ್ನು ಕೆಲಸಕ್ಕೂ ಬಿಡಲ್ಲ. ನನ್ನ ಹತ್ತಿರ ಬಿಡಿಗಾಸೂ ಇಲ್ಲ. ನೀನು ಡಬ್ಬಿಯಲ್ಲಿ ಮುಚ್ಚಿಟ್ಟ ಹಾಗೆ ಇರಬೇಕು ಎನ್ನುತ್ತಾರೆ. ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ. ನಾನು ಫೋನಿನಲ್ಲೂ ಯಾರ ಹತ್ತಿರವೂ ಮಾತನಾಡುವಂತಿಲ್ಲ. ನನಗೆ ಸಾಯಬೇಕೆನ್ನಿಸುತ್ತಿದೆ. ಈ ನರಕದಿಂದ ನಾನು ಹೇಗೆ ಹೊರಬರಲಿ?
ನೀವು ಧೈರ್ಯವಾಗಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾನೂನಿನ ಕೆಳಗೆ ಪ್ರಕರಣ ದಾಖಲಿಸಿ. ನಿಮ್ಮ ಪತಿಯಿಂದ ನಿಮಗೆ ಆಗುತ್ತಿರುವ ಹಿಂಸೆಯನ್ನೆಲ್ಲ ವಿವರಿಸಿ. ಆತ ನಿಮ್ಮ ಮನೆಗೆ ಬರಬಾರೆದನ್ನುವ ಆದೇಶವನ್ನೂ ಪಡೆಯಿರಿ. ನಿಮಗೆ ಹಿಂಸೆ ಮಾಡಬಾರದೆಂದು ರಕ್ಷಣೆಯ ಆದೇಶವನ್ನೂ ಪಡೆಯಿರಿ. ಹಾಗೆಯೇ ಕೌಟುಂಬಿಕ ನ್ಯಾಯಾಲಯದಲ್ಲಿ ನಿಮಗೂ, ನಿಮ್ಮ ಮಗಳಿಗೂ ಜೀವನಾಂಶ ಬೇಕೆಂದು ಪ್ರಕರಣ ದಾಖಲಿಸಿ. ಕೇಸು ನಡೆಯುವವರೆಗೆ ಮಧ್ಯಂತರ ಜೀವನಾಂಶ ಕೊಡಿಸಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ ಹಾಕಿ. ನಿಮ್ಮ ಪತಿಯ ಸಂಬಳದಲ್ಲಿ ಮೂರನೇ ಒಂದು ಭಾಗದಿಂದ ಐದನೇ ಒಂದು ಭಾಗದವರೆಗೆ ಯಾವುದೋ ಒಂದು ಮೊತ್ತದ ಹಣ ನಿಮಗೆ ಜೀವನಾಂಶದ ರೂಪದಲ್ಲಿ ಕೊಡುವಂತೆ ನ್ಯಾಯಾಲಯ ಆದೇಶ ಮಾಡುತ್ತದೆ. ಕೇಸು ದಾಖಲಿಸಿದ ಮೊದಲ ಎರಡು ಮೂರು ತಿಂಗಳಿಗೆ ನಿಮ್ಮ ಸಂಸಾರ ನಡೆಸಲು ಯಾರಾದರೂ ಸಹಾಯ ಮಾಡಲು ಸಿದ್ಧರಿದ್ದರೆ ನೀವು ಹೆದರದೇ ಕೇಸು ಹಾಕಿ.
·ನಾನು ಒಬ್ಬರು ಮುಸಲ್ಮಾನ ಜನಾಂಗದ ವ್ಯಕ್ತಿಯ ಹತ್ತಿರ ಒಂದು ಜಮೀನನ್ನು ಖರೀದಿ ಮಾಡಲು ಕ್ರಯದ ಒಪ್ಪಂದ ಮಾಡಿಕೊಂಡಿದ್ದೇನೆ. ಅದು ಅವರ ಪಿತ್ರಾರ್ಜಿತ ಜಮೀನು. ಆ ಜಮೀನು ಅವರ ತಂದೆ ಸಂಪಾದಿಸಿದ ಜಮೀನು. ಅವರ ತಂದೆ ತಾಯಿ ಇಬ್ಬರೂ ಇಲ್ಲ. ಇವರು ಒಬ್ಬರೇ ಮಗ. ಖಾತೆ ಪಹಣಿ ಎಲ್ಲಾ ಇವರ ಹೆಸರಿಗೇ ಬರುತ್ತಿದೆ. ಹತ್ತು ಲಕ್ಷ ರೂಪಾಯಿ ಮುಂಗಡ ಹಣವನ್ನೂ ಕೊಟ್ಟಿದ್ದೇನೆ. ಇನ್ನು ಬಾಕಿ ಹತ್ತು ಲಕ್ಷ ಹಣ ಕೊಡಬೇಕಾಗಿದೆ. ಅಗ್ರಿಮೆಂಟ್ ಅವರು ಮಾತ್ರ ಮಾಡಿಕೊಟ್ಟಿದ್ದಾರೆ. ಮಾತುಕತೆ ಆಗುವಾಗ, ಆತ, ಮುಂದೆ ರಿಜಿಸ್ಟರ್ ಮಾಡುವ ಸಮಯದಲ್ಲಿ ತನ್ನ ಮಕ್ಕಳ ಸಹಿ ಹಾಕಿಸುತ್ತೇನೆ ಎಂದು ಹೇಳಿದ್ದರು. ನಾನು ಅವರನ್ನು ನಂಬಿದ್ದೆ. ಈಗ ಅವರು ನನ್ನ ಮಕ್ಕಳು ಯಾರೂ ಬರುವುದಿಲ್ಲ ನಾನು ಮಾತ್ರ ರಿಜಿಸ್ಟರ್ ಮಾಡಿಕೊಡುತ್ತೇನೆ ಎನ್ನುತ್ತಿದ್ದಾರೆ. ಪಿತ್ರಾರ್ಜಿತ ಆಸ್ತಿ ಮಾರುವಾಗ ಮಕ್ಕಳ ಸಹಿ ಇಲ್ಲದೇ ಕೊಂಡುಕೊಳ್ಳಬಹುದೇ? ನನಗೆ ಮುಂದೆ ತೊಂದರೆ ಆಗುವುದಿಲ್ಲವೇ?
ನೀವು ಧೈರ್ಯವಾಗಿ ಆಸ್ತಿಯನ್ನು ರಿಜಿಸ್ಟರ್ ಮಾಡಿಸಿಕೊಳ್ಳಿ. ಮುಸಲ್ಮಾನರ ವೈಯಕ್ತಿಕ ಕಾನೂನು ಬೇರೆ. ಹಿಂದೂಗಳ ವೈಯಕ್ತಿಕ ಕಾನೂನು ಬೇರೆ. ಮುಸಲ್ಮಾನರ ವಿಷಯದಲ್ಲಿ ಪಿತ್ರಾರ್ಜಿತ ಆಸ್ತಿ ಸ್ವಯಾರ್ಜಿತ ಆಸ್ತಿ ಎನ್ನುವ ಪರಿಕಲ್ಪನೆ ಇರುವುದಿಲ್ಲ. ಆ ಧರ್ಮದವರಲ್ಲಿ ತಂದೆ ಬದುಕಿರುವಾಗ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಬರುವುದಿಲ್ಲ.