

ರಾಯಚೂರು: ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆಯಿಂದ ತೆರವಾಗಿರುವ ಮಸ್ಕಿ ವಿಧಾನಸಭೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ಉಪಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಇದಕ್ಕೂ ಮುನ್ನವೇ ಬಿಜೆಪಿ ನಾಯಕರು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ಮಸ್ಕಿಯ ಭ್ರಮಾರಂಭ ದೇವಸ್ಥಾನ ಆವರಣದಲ್ಲಿ ಬುಧವಾರ ಪ್ರಚಾರ ಸಭೆ ನಡೆದಿದ್ದು, ಕಾರ್ಯಕ್ರಮದಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸೋಮಣ್ಣ, ಪ್ರತಾಪ್ ಗೌಡ ಗೆದ್ದ ಒಂದು ವಾರದಲ್ಲಿ ಅವರನ್ನು ಸಚಿವರನ್ನಾಗಿ ಯಡಿಯೂರಪ್ಪ ಮಾಡುತ್ತಾರೆ. ಈ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಬೇಕಾಗಿತ್ತು ಎಂಬುದು ಜನರ ಅಪೇಕ್ಷೆ. ಅದರಂತೆ ಪ್ರತಾಪ್ ಗೌಡರನ್ನ ಸಚಿವರನ್ನಾಗಿ ಮಾಡಲಾಗುತ್ತೆ ಎಂದು ಘೋಷಣೆ ಮಾಡಿದರು. ಪ್ರತಾಪ್ ಗೌಡರನ್ನ ಹೊರತುಪಡಿಸಿ ಬೇರೆಯವರಿಗೆ ವೋಟ್ ಹಾಕಿದ್ರೆ ವ್ಯರ್ಥ ಆಗುತ್ತೆ ಎಂದರು.
ಮಸ್ಕಿಯಲ್ಲಿ 5000 ಮನೆಗಳನ್ನು ನಿರ್ಮಿಸುವ ಮೂಲಕ ಈ ಕ್ಷೇತ್ರವನ್ನ ಗುಡಿಸಲು ಮುಕ್ತವನ್ನಾಗಿ ಮಾಡುತ್ತೇವೆ. ನೀರಾವರಿಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದ ಸೋಮಣ್ಣ, ಶಿರಾ ಹಾಗೂ ಆರ್ ಆರ್ ನಗರದಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿರಲಿಲ್ಲ. ಈ ಬಾರಿ ಜನತೆ ಬಿಜೆಪಿಗೆ ಮಣೆ ಹಾಕಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳುತ್ತೇವೆ. ಕೊಟ್ಟ ಭರವಸೆ ಶೀಘ್ರವೇ ಈಡೇರಲಿದೆ ಎಂದರು.
ಬಸನಗೌಡ ತುರವಿಹಾಳ ಅವರನ್ನು ಕಾಡಾ ಅಧ್ಯಕ್ಷರನ್ನಾಗಿ ಮಾಡಿದ್ದೆವು. ಆದರೆ, ಅವರು ಕಾಂಗ್ರೆಸ್ಗೆ ಹೋಗಬಾರದಿತ್ತು. ಕಾಂಗ್ರೆಸ್ ಒಡೆದ ಮನೆಯಾಗಿದೆ. ಅಲ್ಲಿ ಹೋಗಿ ಪಶ್ಚಾತ್ತಾಪ ಪಡುತ್ತಾರೆ. ಇನ್ನೊಮ್ಮೆ ವಿಚಾರ ಮಾಡಿ ಎಂದು ಬಸನಗೌಡ ತುರವಿಹಾಳಗೆ ಸೋಮಣ್ಣ ಕಿವಿಮಾತು ಹೇಳಿದರು.
ಮುಂದಿನ ಸಚಿವರಿಗೆ ಮತ ಹಾಕಬೇಕು ಎನ್ನುವ ಮೂಲಕ ಪ್ರತಾಪ್ ಗೌಡ ಪಾಟೀಲ್ ಸಚಿವರಾಗ್ತಾರೆ ಎಂದು ಶಾಸಕ ರಾಜೂಗೌಡ ಹೇಳಿದರು.
ಸಂಸದರಾದ ಸಂಗಣ್ಣ ಕರಡಿ, ರಾಜಾ ಅಮರೇಶ್ವರ ನಾಯಕ, ಶಾಸಕರಾದ ಶಿವರಾಜ್ ಪಾಟೀಲ್, ಹಾಲಪ್ಪ ಆಚಾರಿ, ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರು ಮತ್ತಿತರರು ಉಪಸ್ಥಿತರಿದ್ದರು.