ಸಂಗೀತ ಸೇವೆ ನನ್ನ ಪೂರ್ವಜನ್ಮದ ಸುಕೃತ ಫಲಾ ನೋಡ್ರೀ...!

66
Published on
ಗುರುಗಳ ಪುಣ್ಯಾರೀ ಎಲ್ಲಾ ಇದು... ಇಷ್ಟೆಲ್ಲಾರೂ ನನ್ ಸಂಗೀತವನ್ನು ಕೇಳ್ತೀರಿ... ನನ್ನ ಹಾಡನ್ನು ಪ್ರೀತಿಸ್ತೀರಿ... ಇಷ್ಟು ನೀವೆಲ್ಲಾರೂ ಬಂದು ಗೌರವದಿಂದ ನನ್ನನ್ನ ಮಾತಾಡಸ್ತೀರಲ್ಲಾ ಇದಕ್ ಕಾರಣ ಬ್ಯಾರೇ ಏನೂ ಅಲ್ಲರೀ... ನಮ್ಮ ಗುರುಗಳ ಆಶೀರ್ವಾದ... ಪುಟ್ಟರಾಜ ಅಜ್ಜಾವ್ರು ನನಗ ಗುರುಗಳಾಗಿದ್ದು ನನ್ನ ಪುಣ್ಯ... ನನ್ನ ಪೂರ್ವಜನ್ಮದ ಸುಕೃತ ಫಲ ನೋಡ್ರೀ...

ಯಾಕಂದ್ರ ಅವರ ಕೃಪಾದೃಷ್ಟಿ ನನ್ನ ಮ್ಯಾಲೆ ಇರದಿದ್ರ ಇವತ್ತ ನಾನು ಎಲ್ಲಿ ಇರ್ತಿದ್ನೋ ಏನೋ...! ಇವತ್ತಿನ ಈ ನನ್ ಪ್ರಸಿದ್ಧಿಗೆ... ಪ್ರಶಸ್ತಿಗಳಿಗೆ ಎಲ್ಲಾದಕ್ಕೂ ಅವರೇ ಕಾರಣ ನೋಡ್ರಿ. ನಮ್ಮ ಗುರುಗಳು ಗಂಧದ ಕೊರಡಿನ್ಹಾಂಗ್ ಜೀವಾ ತೇದು ಕಣ್ಣು, ಕಾಲಿಲ್ಲದವರಿಗೆ ಬೆಳಕು ನೀಡಿದವ್ರು... ಲಿಂಗೈಕ್ಯರಾಗೋತನಕ ಅವ್ರಿಂದ ಪಾಠಾ ಹೇಳಿಸಿಕೊಂಡೆ... ಅದು ನನ್ನ ಭಾಗ್ಯ...

ನಾನು ಹುಟ್ಟಿದ್ದು 1953ರ ಜುಲೈ 1ರಂದು. ನಮ್ಮ ತಂದೆ ಹೂಲೆಪ್ಪನವರು ಜನಪದ ಕಲಾವಿದರು. ಆಗಿನ ಕಾಲದೊಳಗ ಅವ್ರು ಕರ್ನಾಟಕಿ ಸಂಗೀತದ ಅಭ್ಯಾಸ ಮಾಡಿದ್ರು. ನನ್ನ ತಾಯಿ ಪಾರ್ವತಮ್ಮ. ನನ್ನ ಸೋದರಮಾವ ಬೆಳಗಲ್ಲ ವೀರಣ್ಣನವರು ಪ್ರಸಿದ್ಧ ರಂಗನಟರು. ನಾನು ಹುಟ್ಟಿದೂರು ಲಕ್ಷ್ಮೀಪುರ... ಬಳ್ಳಾರಿ ಜಿಲ್ಲೆಯ ಒಂದು ಸಣ್ಣ ಹಳ್ಳಿ... ಮೂರು ಕಿ.ಮೀ. ನಡಕೊಂಡು ಹೋಗಿ ಸಾಲಿ ಕಲೀಬೇಕಿತ್ತು... ಅಲ್ಲೇ ಐದನೇತ್ತೆವರೆಗೆ ಅಭ್ಯಾಸ ಮಾಡ್ದೆ. ನಮ್ ತಂದೆ ಜೊತೆ ದೊಡ್ಡಾಟ, ಬಯಲಾಟದಾಗ ನಾನೂ ಹಾಡ್ತಿದ್ದೆ. ಅದನ್ನ ಊರಿನವರು ನೋಡಿ ‘ಇವಂಗ ಸಂಗೀತ ಕಲಸ್ರೀ’ ಅಂತ ಹೇಳವ್ರು... ನಮ್ಮ ತಾಯಿಗೂ ನನಗ ಸಂಗೀತ ಕಲಸಬೇಕಂತ ಭಾಳ ಇಚ್ಛಾ ಇತ್ತು. ಅದಕ್ಕ ನಮ್ಮ ತಂದಿಗೆ, ಸೋದರಮಾವಗ ಹೇಳಿದ್ರು. ಆಗ ನನ್ನ ಮಾವನವರಿಗೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಬಗ್ಗೆ ನಾಟಕದ ಗೆಳ್ಯಾರ ಮೂಲಕ ಗೊತ್ತಿತ್ತು. ಹಿರ್ಯಾರೆಲ್ಲಾರೂ ಸೇರಿ ಶ್ರಾವಣ ಮಾಸದ ಸೋಮವಾರ ನನ್ನನ್ನ ಗುರುಗೋಳ ಪಾದಕ್ಕ ಹಾಕಿದ್ರು. ಗುರುಗಳು ಹಾಡಿಸಿದ್ರು. ಅವರಿಗೆ ಗೊತ್ತಿತ್ತು, ಅವರು ತ್ರಿಕಾಲಜ್ಞಾನಿಗಳು. ‘ಇವಂದು ಧನಿ ಛೋಲೊ ಅದ ಆದ್ರ ಇವಾಂ ಚಂಚಲ ಅದಾನ’ ಅಂತಂದ್ರು. ಮತ್ತ ನಾವು ಬಡವರು ಅಂತ ಹೇಳಿದ್ದಕ್ಕ 65 ರೂ. ತೊಗೊಂಡು ಅಜ್ಜಾವ್ರು ಆಶ್ರಮಕ್ಕ ಸೇರಿಸಿಕೊಂಡ್ರು. ಅದು 1967-68ನೇ ಇಸ್ವಿ ನೋಡ್ರಿ. ನನಗ 13 ವರ್ಷ ವಯಸ್ಸು. ಅಲ್ಲಿಂದ ಶುರುವಾತು ನನ್ನ ಸಂಗೀತದ ಜೀವನ.

ಆಶ್ರಮದಾಗ ಆವಾಗ ಹಿರಿಯ ವಿದ್ಯಾರ್ಥಿಗಳ ಕಡೆ 2 ವರ್ಷದ ತರಬೇತಿ ಇತ್ತು. ಆಮೇಲೆ ಹಿರಿಯ ಪ್ರಾಧ್ಯಾಪಕ ಹನುಮಂತಸಿಂಗ್ ಗವಾಯಿಗಳ ಕಡೆ ಭಾಳ ಕಠಿಣವಾದ 2 ವರ್ಷ ಕಳೆದೆ. ಮುಂದ ಪುಟ್ಟರಾಜ ಅಜ್ಜಾವ್ರ ಸ್ವತಃ ನನಗೆ ಹೇಳಿಕೊಡೋದಕ್ಕ ಶುರು ಮಾಡಿದ್ರು. ಆಶ್ರಮದ ನಿಯಮಗಳು ಭಾಳ ಕಠಿಣ ಇದ್ದವು. ಹೀಂಗಾಗಿ ನಾನು ಅಪ್ಪಗ ಅವ್ವಗ ಆರಾಮ್ ಇಲ್ಲಾಂತ ನೆಪ ಹೇಳಿ ಬಿಟ್ಟು ಹೋಗ್ತಿದ್ದೆ. ಆದ್ರ ಗುರುಗಳಿಗೆ ಎಲ್ಲಾ ಗೊತ್ತು. ‘ಹಂಗ ಹೋಗಬ್ಯಾಡೋ, ಕಲಿ ಛೋಲೋತ್ನಾಗ, ಆಮೇಲೆ ಹೋಗೂವಂತಿ’ ಅಂತ ನನಗೆ ಭಾಳ ಪ್ರೀತಿಯಿಂದ ಕಲಿಸ್ತಿದ್ರು. ಪ್ರತಿದಿನ ಅವರದು ಮೂರು ತಾಸುಗಳ ಪೂಜೆ ನಡೀತಿತ್ತು.. ಅತ್ಲಾಗ ನಮ್ಮ ಗಾಯನ. ನಾವು ಆಗ ನಿರಂತರವಾಗಿ ಗುರುಗಳು ಕಲಿಸಿದ ರಾಗಗಳನ್ನ ಹಾಡಬೇಕು. ತಮ್ಮ ಪೂಜಾ ಆದ ನಂತರ ನನಗ ಬರ್ಲಿಕ್ಕೆ ಹೇಳಿ ನಾನು ಮಾಡಿದ ತಪ್ಪುಗಳನ್ನು ತಿದ್ದೋರು. ಬೆಳಗ್ಗೆ 6ರಿಂದ 9ರವರೆಗೆ ಸಂಗೀತ ಪಾಠ. ಹಿಂಗ ಕನಿಷ್ಠ 6-7 ವರ್ಷ ತಾವೇ ನಮಗ ಕಲಿಸಿದ್ರು. ಆಮೇಲೆ ನಂದು ಕಲಿಕಾ ಅವಧಿ ಮುಗೀತು. ಆದರ ಮಾರ್ಗದರ್ಶನ ನಿಲ್ಲಲಿಲ್ಲ. ಅವರು ಲಿಂಗೈಕ್ಯರಾಗೋತನಕ ಅವರ ಸಂಪರ್ಕದಾಗ ಇದ್ದೆ. ಅವರಿಂದ ಪಾಠ ಹೇಳಿಸಿಕೊಂಡೆ. ರೇಡಿಯೋ ಕೇಳಿಸಿಕೊಂಡು ತಪ್ಪಾದ್ರ ಹೇಳೋರು ‘ಏ ವೆಂಕಟೇಶಾ ಹಿಂಗ್ಯಾಕ ಹಾಡೀದ್ಯೋ... ಹೀಂಗ ಹಾಡಬೇಕ್ ಇದನ್ನ...’ ಅಂತ ನನಗ ಹಾಡಿ ತೋರಿಸೋರು. ‘ದೊಡ್ಡ ಕಲಾವಿದರ ಗಾನ ಕೇಳು’ ಅಂತಂದು ಹುರುಪು ತುಂಬೋರು. ಅವರು ಸಂಸ್ಕೃತ- ಸಂಗೀತ ಪಂಡಿತರು. ಕೆಲವು ಅಪ್ರಚಲಿತ ರಾಗಗಳನ್ನೂ ನನಗ ಹೇಳಿಕೊಟ್ಟರು. ಈಗ ಅವನ್ನ ನಾ ಹಾಡಿದ್ರ ಎಲ್ಲಾರೂ ‘ಇದ್ಯಾವ ರಾಗ ಯಾರ ಬಂದಿಶ್’ ಅಂತ ಕೇಳ್ತಾರ. ನನ್ ಗುರುಗಳಂದ್ರ ದೊಡ್ಡ ಶಕ್ತೀರೀ ಅದು. ಸಾಮಾನ್ಯಲ್ಲ...! ಅಂಥಾವ್ರು ನನಗ ಸಿಕ್ಕಿದ್ದು ನನ್ನ ಸೌಭಾಗ್ಯ ಅಲ್ಲದ ಮತ್ತೇನು?

ಇನ್ನ ಆಶ್ರಮದ ಶಿಕ್ಷಣ ಮುಗೀತು. ಮತ್ತ ವಾಪಸ್ ಊರಿಗ್ಹೋದೆ. ನನಗಾಗ 23-24 ವಯಸ್ಸು. ಅವಾಗ ನಮಗ ಸಂಗೀತ ಕಾರ್ಯಕ್ರಮಕ್ಕ ಕರೆಯೋರ್ಯಾರು? ಮತ್ತೊಂದಿನ ಗುರುಗಳು ನನ್ನನ್ನ ಮತ್ತ ಕುಮಾರದಾಸನ್ನ ಶಿವಮೊಗ್ಗಕ್ಕ ಪುರಾಣಕ್ಕಂತ 15 ದಿವಸ ಕರೆಸಿಕೊಂಡ್ರು. ಅಲ್ಲಿದ್ದಾಗ ನಮ್ಮಪ್ಪನಿಂದ ಟೆಲಿಗ್ರಾಮ್ ಬಂತು. ‘ನಿನ್ನ ಮದುವೀ ಗೊತ್ತ ಮಾಡೀವಿ ಬಾ’ ಅಂತ. ಗುರುಗಳಿಗೆ ತಿಳಿಸಿದಾಗ, ‘ನೋಡು ಪುರಾಣಸೇವಾ ಮಾಡೀದೆಲಾ. ಅದರ ಫಲಾ ಇದು.. ನಿನಗ ಮಂಗಳ ಆಕ್ಕೆ ೖತಿ ಹೋಗಿಬಾ’ ಅಂತ ಆಶೀರ್ವಾದ ಮಾಡಿ ಕಳಿಸಿದ್ರು. ಮುಂದ 8 ದಿವಸದಾಗ ಬೆಳಗಲ್ಲ ವೀರಣ್ಣನವರ ಮಗಳು ಲಕ್ಷ್ಮೀಯೊಂದಿಗೆ ನನ್ನ ವಿವಾಹ ಆಯ್ತು.

ಮದುವ್ಯಾತು, ಆದ್ರ ನೌಕರಿ ಇಲ್ಲ. ಸುಮಾರು ನಾಲ್ಕು ವರ್ಷ ಭಾಳ ಕಷ್ಟದ ದಿನಗಳವು. 1978ರೊಳಗ ಗದುಗಿನ್ಯಾಗ ವಿಜಯ ಕಲಾಮಂದಿರದೊಳಗ ಶಿಕ್ಷಕನಾಗಿ ನೌಕರಿ ಮಾಡಾಕ ಶುರು ಮಾಡಿದೆ. ಮುಂದ ಹರಪನಹಳ್ಳಿಯ ತೆಗ್ಗಿನಮಠ ಸ್ವಾಮಿಗಳ ಟ್ರೇನಿಂಗ್ ಕಾಲೇಜಿಗೆ ಸೇರಿಕೊಂಡೆ. ಅಲ್ಲೇ ವಾರಕ್ಕ ಎರಡ ದಿವಸ ಸಂಗೀತ. ಪಾರ್ಟ್​ಟೈಂ. ತಿಂಗಳಿಗೆ 75 ರೂಪಾಯಿ ಪಗಾರ. ಅಲ್ಲೊಂದು ಸಂಗೀತ ಪಾಠಶಾಲೆ ಇತ್ತು. ಸಂಗೀತ ಕಲಿಸ್ತಿದ್ದೆ. ಅಲ್ಲೇ ಸ್ವಲ್ಪ ಲಾಭ ಆತು. ಅಲ್ಲೇ ಮನಿ ಮಾಡಿದೆ. ಮುಂದ 1981ರೊಳಗ ಉಡುಪಿಯ ಟಿ.ಎಂ.ಎ. ಪೈ ಅವರ ಮುಕುಂದ ಕೃಪಾ ಪಾಠಶಾಲೆಯ ಆಗಿನ ಪ್ರಿನ್ಸಿಪಾಲರಾಗಿದ್ದ ಮಾಧವಭಟ್ಟರು ನನಗ ‘ನಮ್ಮಲ್ಲಿಗಿ ಬರ್ರಿ’ ಅಂತ ಆಹ್ವಾನ ಕೊಟ್ಟರು. ನಾನು ಅಲ್ಲಿ ಸೇರಿಕೊಂಡೆ. ಅವಾಗ ತಿಂಗಳಿಗೆ 400 ರೂ. ಪಗಾರ. ಅದೂ ನನಗ ಕಷ್ಟಾತು. 1983ರೊಳಗ ಮತ್ತ ಗದುಗಿನ ಕಲಾಮಂದಿರಕ್ಕ ಬಂದೆ. ಅಲ್ಲಿ ಪೋಸ್ಟ್ ಖಾಲಿಯಿತ್ತು. ಅಲ್ಲಿಯೂ ವಾರಕ್ಕ 50- 60 ರೂ. ಪಗಾರ. ನಾಲ್ಕು ವರ್ಷ ಮಾಡೀದೆ.

ಆದರ ಸಂಗೀತದ ಜೀವನಾ ಭಾಳ ಕಠಿಣ ಅನಿಸ್ತು. ಅದಕ್ಕ ಒಂದ್ ದಿನಾ ಗುರುಗಳ ಕಡೆ ಹೋದೆ. ‘ಏನಪಾ ಹೆಂಗದಿ.. ಆರಾಮ್ ಅದಿಯಿಲ್ಲೋ’ ಅಂತ ಕೇಳಿದ್ರು. ನನಗಾಗ ಭಾಳ ದುಃಖಾಗಿತ್ತು. ‘ಇಲ್ಲರಿ ಗುರುಗಳ ಏನೂ ಆರಾಮ್ ಇಲ್ಲಾ. ಸಂಗೀತ ಕಲಿತು ಜೀವನಾ ಮಾಡೋದು ದುಸ್ತರ ಆಗಿಬಿಟೈತಿ. ಸುಮ್ನ ಹಮಾಲಿ ಮಾಡೀದ್ರ ಬೇಷಿತ್ತು’ ಅಂದೆ. ಅದಕ್ಕವರಿಗೆ ಕಿರಿಕಿರಿ ಆತು. ಆಗ ಅವರು ಕೂಡ್ರಿಸಿಕೊಂಡು ಸಮಾಧಾನ ಹೇಳಿದ್ರು. ‘ಯಾಕ್ ದುಃಖಪಡ್ತೀ ಬಿಡೋ.. ಒಳ್ಳೇದಾಕೈತಿ. ನಿನಗ ನೌಕರಿ ಸಿಗತೈತಿ. ನಿನಗ ಕಾಲೇಜಿನ್ಯಾಗ ನೌಕರಿ ಸಿಗತೈತಿ, ಚಿಂತಿ ಮಾಡಬ್ಯಾಡಾ ನಡೀ’ ಅಂತ ಧೈರ್ಯ ತುಂಬಿ ಕಳಿಸಿದ್ರು.

ಅವರು ಹೇಳಿ ಆರು ತಿಂಗಳೊಳಗ ಧಾರವಾಡ ಟ್ರೇನಿಂಗ್ ಕಾಲೇಜಿಂದ ಅಪಾಯಿಂಟ್​ವೆುಂಟ್ ಆರ್ಡರ್ ಬಂದಬಿಡ್ತು. ಮತ್ತ ನಮ್ ಗುರುಗಳ ಕಡೆ ಹೋಗಿ ತಿಳಿಸಿದೆ. ‘ಯಾವೂರಿಗೆ ಆಗೈತಿ’ ಅಂತ ಕೇಳಿದ್ರು. ‘ಧಾರವಾಡಕ್ಕರೀ’ ಅಂತ ಹೇಳ್ದೆ. ‘ಅಬ್ಬಾಬಾ ನೀ ಭಾಳ ಭಾಗ್ಯವಂತಬಿಡು’ ಅಂತಂದ್ರು. ‘ಅದು ನಿಮ್ಮ ಆಶೀರ್ವಾದ್ರಿ’ ಅಂತಂದೆ. 1984ರಿಂದ 1993ರವರೆಗೆ ಟ್ರೇನಿಂಗ್ ಕಾಲೇಜಿನ್ಯಾಗ ಸಂಗೀತ ಶಿಕ್ಷಕನಾಗಿ ಕೆಲಸ ಮಾಡಿದೆ. 1993ಕ್ಕ ಎರಡ ಕಡೆ ಪೋಸ್ಟ್ ಕರದ್ರು. ಒಂದು ವಿಶ್ವವಿದ್ಯಾಲಯಕ್ಕ, ಇನ್ನೊಂದು ಕೆಸಿಡಿ ಮ್ಯೂಜಿಕ್ ಕಾಲೇಜಿಗೆ. ನಂದು ಪರ್ಫಾರ್ವಿುಂಗ್ ಆರ್ಟಿಸ್ಟ್ ಆಧಾರದ ಮ್ಯಾಲೆ ಸೆಲೆಕ್ಷನ್ ಆತು. ಅವಾಗ ಆಕಾಶವಾಣಿ ಎ ಗ್ರೇಡ್ ಆಗಿತ್ತು. 1993ರಿಂದ 2015ರವರೆಗೆ ಅಲ್ಲೇ ಸಂಗೀತ ಪ್ರಾಧ್ಯಾಪಕನಾಗಿ ಕೆಲಸ ಮಾಡಿ ರಿಟೈರ್ ಆದೆ. ಅದರ ಜೊತಿಗೆ ಬ್ಯಾರೆ ಬ್ಯಾರೆ ಊರಿಗೆ ಹಾಡ್ಲಿಕ್ಕೆ ಹೋಗೂದು ಶುರುವಾತು.. ಗುರುಗಳ ಕೃಪೆಯಿಂದ ಇನ್ನೂ ಮುಂದುವರದೈತಿ.

ನೋಡ್ರಿ... ನಾನಿಷ್ಟು ಎತ್ತರಕ್ಕ ಬೆಳ್ಯಾಕ ಕಾರಣ ನನ್ನ ಧರ್ಮಪತ್ನಿ ಲಕ್ಷ್ಮೀದೇವಿ. ಆಕೀದು ಪಾತ್ರ ಭಾಳ ದೊಡ್ಡದರೀ. ನಾನು ಕಾಯಂ ಸಂಗೀತದಾಗ್ ಇರಾಂವ. ಊರೂರು ಅಡ್ಯಾಡಂವ. ಮನಿ ಮಕ್ಕಳ ಕಡೆ ಲಕ್ಷ್ಯ ಕೋಡೋರು ಯಾರು? ಅವಾಗ ಅದರ ಸಂಪೂರ್ಣ ಜವಾಬ್ದಾರಿ ಹೊತ್ತೋರು ನನ್ನ ಶ್ರೀಮತಿ. ಹೀಂಗ್ ಹೇಳ್ಕೋಳಾಕ ನನಗ ಹೆಮ್ಮೆ ಅದರೀ. ಇಲ್ಲಾಂದ್ರ ಹಾಡೂದು ಸಾಧ್ಯನೇ ಇಲ್ಲಾ. ನನ್ನ ಸ್ವರಸಾಧನೆಗೆ ನಮ್ಮಾಕಿ ಕೊಟ್ಟ ಸಹಕಾರ, ಪ್ರೋತ್ಸಾಹ ಮತ್ತ ಮಾಡಿದ ತ್ಯಾಗ ಸತ್ಯವಾಗ್ಲೂ ಸ್ಮರಣೀಯ. ಆ ವಿಷಯದಾಗ ನಾ ಭಾಳ ಲಕ್ಕಿ ನೋಡ್ರಿ.

ಇವತ್ತಿನ ಶಾಸ್ತ್ರೀಯ ಸಂಗೀತದ ವಿಷಯಕ್ಕ ಬರೂದಾದ್ರ ಭಾಳ ಛೊಲೋ ಹಾಡುವ ಯುವಸಮೂಹ ತಯ್ಯಾರಾಗಕಹತೆôತಿ. ಭಾಳ ಖುಷಿ ವಿಚಾರ. ಅವರಿಗೆ ನಾ ಹೇಳೂದು ಇಷ್ಟ. ಗುರುವಿನ ಕೃಪೆ, ನಿರಂತರ ರಿಯಾಜ್ ಎರಡೂ ಭಾಳ ಮುಖ್ಯ. ಮುಂದ ನಮ್ಮ ನಸೀಬ್. ಬೇರೆ ಕಲಾವಿದರು ಹಾಡೂದನ್ನ ಕೇಳೂದು ಅಷ್ಟೇ ಮುಖ್ಯ. ನಿಮಗ ಖರೆ ಹೇಳಬೇಕಂದ್ರ ನನಗ ಸಂಗೀತದ ಅಂತರಾಳ ಈಗ ತಿಳ್ಯಾಕತೆôತಿ. ನನಗ 60-70 ತುಂಬಿದ ಮ್ಯಾಲೆ...! ಶಾಸ್ತ್ರೀಯ ಸಂಗೀತ ವ್ಯಾವಹಾರಿಕ ವಿದ್ಯೆ ಅಲ್ಲ. ಆಧ್ಯಾತ್ಮಿಕ ವಿದ್ಯೆ.

‘ಯಾವುದೇ ಸಮಯದ ರಾಗ ಇರ್ಲಿ. ಅದಕ್ಕ ಸ್ವಂತ ಗುಣಲಕ್ಷಣಗಳು ಇರ್ತಾವು. ಅವು ವಿಶಿಷ್ಟ ರಸವನ್ನು ಹೊರಸೂಸ್ತಾವು. ಆದ್ರ ಎಲ್ಲಾದಕ್ಕೂ ಸ್ವರಗಳ ಭಾವ ಹಾಗೂ ಕಲ್ಪನೆಗಳನ್ನು ಅದರೊಂದಿಗೆ ಜೋಡಿಸಬೇಕು. ಆಗ ಜೀವ ಬರ್ತದ. ಛಂದ ಗಾಯನ ಹೊರಹೊಮ್ತದ. ಗಾನ ಸೌಂದರ್ಯ ಆಗಬೇಕಂದ್ರ ರಾಗಕ್ಕ ಸತ್ವಭಾವ ತುಂಬುವುದು ಅತ್ಯಂತ ಅವಶ್ಯ ಐತಿ. ಆದರ ಇದು ತಕ್ಷಣ ಬರುವಂಥದ್ದಲ್ಲ. ಇದಕ್ಕ ಭಾಳ ಅಭ್ಯಾಸ ಬೇಕಾಗತೈತಿ. ನಿರಂತರ ಅಭ್ಯಾಸದಿಂದ ಗಾಯನದ ಲಕ್ಷಣಾ ಬ್ಯಾರೆ ಬ್ಯಾರೆ ಆಕ್ಕೊತ ಹೋಗ್ತಾವು. ಅದಕ ನಿರಂತರ ಅಭ್ಯಾಸ ಭಾಳ ಅವಶ್ಯ ಅದ.

(ನಿರೂಪಣೆ: ರವೀಂದ್ರ ಕವಠೇಕರ, ಸಂಗೀತ ವಿಶ್ಲೇಷಕರು, ಧಾರವಾಡ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net