ಅಂತ್ಯ ಸಂಸ್ಕಾರ ನೆರವೇರಿಸಿ ಅದರ ಎದುರು ಊಟ ಮಾಡಿದ ಕುಟುಂಬಸ್ಥರು

21-RNR-03
Published on

ರಾಣೆಬೆನ್ನೂರ: ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿ ಅದರ ಎದುರೇ ಸ್ಮಶಾನದಲ್ಲಿ ಊಟ ಮಾಡುವ ಮೂಲಕ ತಾಲೂಕಿನ ಮುಷ್ಟೂರು ಗ್ರಾಮದ ಕುಟುಂಬವೊಂದು ಮೂಡ ನಂಬಿಕೆ ದೂರ ಮಾಡಿ ಎಂಬ ಸಂದೇಶ ಸಾರಿದ ಅಪರೂಪದ ಟನೆ ಬುಧವಾರ ನಡೆದಿದೆ.
ಗ್ರಾಮದ ಲಕ್ಷ$್ಮಪ್ಪ ಸಣ್ಣಹನುಮಪ್ಪ ಮುಷ್ಟೂರು ನಾಯಕ ಎಂಬುವರು ಬುಧವಾರ ನಿಧನ ಹೊಂದಿದ್ದರು. ಅವರ ಅಂತ್ಯ ಸಂಸ್ಕಾರವನ್ನು ಗ್ರಾಮದ ರುದ್ರಭೂಮಿಯಲ್ಲಿ ಮಾಡಲಾಯಿತು. ಅವರ ದೇಹ ದಹನ ಮಾಡಿದ ಬಳಿಕ ಅದರ ಎದುರು ಮೃತನ ಕುಟುಂಬದವರು, ಸಂಬಂಧಿಕರು ಊಟ ಮಾಡಿದ್ದಾರೆ.
ಈ ಕುರಿತು ಮೃತನ ಸಂಬಂಧಿ ರವೀಂದ್ರಗೌಡ ಪಾಟೀಲ ಮಾತನಾಡಿ, ಸ್ಮಶಾನದಲ್ಲಿ ಮದುವೆ ಮಾಡುವುದರಿಂದ, ಊಟ ಮಾಡುವುದರಿಂದ ಅತ್ಯಂತ ಪರಿಣಾಮಕಾರಿಯಾಗಿ ಮೂಡ ನಂಬಿಕೆ ತೊಲಗಿಸಬಹುದಾಗಿದೆ. ಸಚಿವ ಸತೀಶ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯಿಂದ ಮೌಡ್ಯತೆ ನಿರ್ಮೂಲನೆಗೆ ಹಮ್ಮಿಕೊಂಡ ಅನೇಕ ಕಾರ್ಯಕ್ರಮಗಳಲ್ಲಿ ಸ್ಮಶಾನದಲ್ಲಿ ಊಟ ಮಾಡುವುದು ಕೂಡ ಒಂದಾಗಿದೆ.
ಆದರೆ, ನಾವು ಮೃತಪಟ್ಟ ವ್ಯಕ್ತಿಯ ದೇಹವನ್ನು ದಹನ ಮಾಡುವ ಸಂದರ್ಭದಲ್ಲಿಯೆ ದುಃಖದಲ್ಲಿರುವ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿ, ಅವರಿಗೆ ಸ್ಮಶಾನದಲ್ಲಿಯೆ ಊಟ ಮಾಡಿಸಿ ದುಃಖ ದೂರ ಮಾಡಿಸುವ ಮೂಲಕ ಸ್ಮಶಾನದ ಬಗ್ಗೆ ಇರುವ ದಂತಕಥೆಗಳು ಮೂಡ ನಂಬಿಕೆಗಳಿಗೆ ತಿಲಾಂಜಲಿ ಇಟ್ಟು ಜನಜಾಗೃತಿ ಮೂಡಿಸಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net