

ಶಿವಮೊಗ್ಗ: ಶಬರಿಮಲೈ ಅಯ್ಯಪ್ಪಸ್ವಾಮಿ ಸೇವಾ ಸಮಾಜಂನಿಂದ ಡಿ.18ರ ಬೆಳಗ್ಗೆ 9ಕ್ಕೆ ಬೊಮ್ಮನಕಟ್ಟೆಯ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಮುಷ್ಟಿ ಅಕ್ಕಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ನಗರ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್ ಹೇಳಿದರು.
ಶಬರಿಮಲೈ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಮಾಲಾಧಾರಿ ಭಕ್ತರಿಗೆ ಅನ್ನದಾನ ನಡೆಸಲು ಅನುಕೂಲವಾಗುವಂತೆ ನಗರದ ಪ್ರತಿ ಮನೆಯಿಂದ ಒಂದು ಮುಷ್ಟಿ ಅಕ್ಕಿ ಹಾಗೂ ಇತರ ದಿನಸಿ ಸಾಮಗ್ರಿ ಸಂಗ್ರಹ ಅಭಿಯಾನ ಇದಾಗಿದೆ. ಆದಿಚುಂಚನಗಿರಿ ಶಿವಮೊಗ್ಗ ಶಾಖಾಮಠದ ಶ್ರೀ ಸಾಯಿನಾಥ ಸ್ವಾಮೀಜಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಉಪಸ್ಥಿತರಿರುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.24ರ ಸಂಜೆ 6ಕ್ಕೆ ವಿನೋಬನಗರದ ಶುಭಮಂಗಳ ಸಮುದಾಯ ಭವನದಲ್ಲಿ ಮಾಲಧಾರಿಗಳಿಂದ ಪಡಿಪೂಜೆ ಹಾಗೂ ಶಕ್ತಿಪೂಜೆ ನೆರವೇರಲಿದೆ. ಸತತ ನಾಲ್ಕು ವರ್ಷಗಳಿಂದ ಮುಷ್ಟಿ ಅಕ್ಕಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಕಳೆದ ವರ್ಷ ಎರಡು ಲಾರಿಗಳಲ್ಲಿ ಶಬರಿಮಲೈಗೆ ಅಕ್ಕಿ ಕಳುಹಿಸಲಾಗಿದೆ ಎಂದು ತಿಳಿಸಿದರು.
ಹಿಂದುತ್ವದ ಪ್ರತಿಪಾದಕರಾದ ಕೆ.ಎಸ್.ಈಶ್ವರಪ್ಪ ನಿರಂತರವಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಡೆಯುವ ಅಭಿಯಾನದಲ್ಲಿ ಪ್ರತಿದಿನ 6 ವಾರ್ಡ್‌ಗಳಲ್ಲಿ 6 ಆಟೋಗಳ ಮೂಲಕ ಡಿ.18ರಿಂದ 24ರವರೆಗೆ ಅಕ್ಕಿ ಸಂಗ್ರಹ ಮಾಡಲಾಗುವುದು ಎಂದು ಹೇಳಿದರು.
ಮಾಲಾಧಾರಿ ಗಣೇಶ್ ಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತ್ರಿ, ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಪ್ರಮುಖರಾದ ಶ್ರೀಕಾಂತ್, ಪ್ರದೀಪ್ ಸ್ವಾಮಿ, ಕುಬೇರಪ್ಪ, ಪ್ರಕಾಶ್, ಶಿವಕುಮಾರ್, ಮಂಜುನಾಥ್, ಶಂಕರ್ ಇತರರಿದ್ದರು.