ಚಿಕಿತ್ಸೆಗೆ ತೆರಳಲಾಗುತ್ತಿಲ್ಲ, ಮಾತ್ರೆಗಳು ಸಿಗುತ್ತಿಲ್ಲ; ಮಸಲ್ಸ್ ಡಿಸ್ಪೋಬಿಯಾದಿಂದ ಸಹೋದರಿಯರ ನರಳಾಟ

page 10 7
Published on

ವಾಡಿ: ಐದು ವರ್ಷಗಳಿಂದ ಕಾಲಿನ ಸ್ವಾಧೀನ ಕಳೆದುಕೊಂಡ ಇಬ್ಬರು ಸಹೋದರಿಯರು ಲಾಕ್​ಡೌನ್​ನಿಂದಾಗಿ ಆಯುರ್ವೆದಿಕ್ ಮಾತ್ರೆ ತರಲು ಕೇರಳ ಹಾಗೂ ಬೆಂಗಳೂರಿಗೆ ಹೋಗಲಾಗದೆ ಅತೀವ ನೋವಿನಿಂದ ಕಣ್ಣೀರಿಡುತ್ತಿದ್ದು, ಸರ್ಕಾರದ ಸಹಾಯಕ್ಕೆ ಅಂಗಲಾಚುತ್ತಿದ್ದಾರೆ.

ಪಟ್ಟಣದ ಎಸಿಸಿ ಕಾಲನಿ ನಿವಾಸಿ ಮಹಾದೇವ- ಪ್ರೇಮಾ ಹೀರಾಪುರ ದಂಪತಿ ಪುತ್ರಿಯರಾದ ಸರಿತಾ (28) ಮತ್ತು ಮಹಾದೇವಿ (24) ಮಸಲ್ಸ್ ಡಿಸ್ಪೋಬಿಯಾ ರೋಗಕ್ಕೆ ತುತ್ತಾಗಿದ್ದು, ಪಾಲಕರು ಕೇರಳದ ಕೋರಿಯಸ್ ಅರ್ಥ್ ಆಯುರ್ವೆದಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಪ್ರತಿ ತಿಂಗಳು ಕೇರಳಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದು, ಅಗತ್ಯಕ್ಕನುಗುಣವಾಗಿ ಬೆಂಗಳೂರಿನ ಜೆಪಿ ನಗರದಲ್ಲಿ ಮಾತ್ರೆಗಳನ್ನು ಖರೀದಿಸುತ್ತಿದ್ದರು. ಲಾಕ್​ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಾತ್ರೆ ತರಲಾಗದೆ, ಕೇರಳಕ್ಕೆ ಹೋಗಿ ಚಿಕಿತ್ಸೆ ಪಡೆಯುವುದಕ್ಕೂ ಆಗದೆ ಪರಿತಪಿಸುತ್ತಿದ್ದಾರೆ. ಮಾತ್ರೆ ಇಲ್ಲದೆ ದಿನೇದಿನೆ ಹೆಚ್ಚುತ್ತಿರುವ ನೋವಿನಿಂದ ನರಳುವಂತಾಗಿದೆ.

ಈ ವಿಷಯವನ್ನು ಕುಟುಂಬಸ್ಥರು ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಜಿಲ್ಲಾ ವೈದ್ಯಾಧಿಕಾರಿ ಗಮನಕ್ಕೆ ತಂದಿದ್ದಾರೆ. ಆದರೆ ಈವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.

ಮಾತ್ರೆಗಳನ್ನಾದರೂ ತಂದುಕೊಡಿ: ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ಶರತ್ ಬಿ. ಮಕ್ಕಳ ನೋವಿಗೆ ಸ್ಪಂದಿಸಿ ಚಿಕಿತ್ಸೆಗಾಗಿ ಕೇರಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ, ಕನಿಷ್ಠಪಕ್ಷ ಬೆಂಗಳೂರಿನಿಂದ ಮಾತ್ರೆಗಳನ್ನು ತರಿಸಿಕೊಡುವ ಪ್ರಯತ್ನವಾದರೂ ಮಾಡಬೇಕಿದೆ ಎಂದು ಮಹಾದೇವ ಹೀರಾಪುರ(ಮೊ.ಸಂ. 95387 70289) ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net