ಹುಡುಗಾಟ ಹಚ್ಚೀದಿ…? ಲೂಸ್‌ಟಾಕ್ ಬಿಟ್ಟುಬಿಡು! ಯತ್ನಾಳ್ ವಿರುದ್ಧ ನಿರಾಣಿ ವಾಗ್ದಾಳಿ

ನಿರಾಣಿ vs ಯತ್ನಾಳ್
Published on

ವಿಜಯಪುರ: ಬೇರೆ ಪಕ್ಷದಲ್ಲಿದ್ದಾಗ ಟೊಪ್ಪಿಗೆ ಹಾಕೊಂಡು ಹಿಂದುಗಳನ್ನು ಬೈಯ್ಯೋದು, ಬಿಜೆಪಿಗೆ ಬಂದಾಗ ಅವರಿಗೆ ಬೈಯ್ಯೋದು, ವೇದಿಕೆ ಮೇಲೆ ವೀರಶೈವ ಲಿಂಗಾಯತ ಬಣಜಿಗ ಸಮಾಜ ಮುಖಂಡರ ಬಗ್ಗೆ ಕಿಂಡಲ್ ಮಾಡೋದು, ಬಿಜೆಪಿ ನಾಯಕರ ಬಗ್ಗೆ ಲೂಸ್ ಆಗಿ ಮಾತಾಡೋದು, ಹರಿಹರ ಪೀಠವನ್ನು ಸುಡುಗಾಡು ಎನ್ನೋದು....ಏನು ಹುಡುಗಾಟ ಹಚ್ಚೀದಿ....? ಎಂದು ಸಚಿವ ಮುರುಗೇಶ ನಿರಾಣಿ ಬಿಜೆಪಿಯ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಹರಿಹಾಯ್ದಿದ್ದಾರೆ.

ನಿಮಗೆ ಗೊತ್ತಿರುವ ಭಾಷೆ ನಮಗೂ ಗೊತ್ತಿದೆ. ನಾವೂ ಇದೇ ಕೃಷ್ಣಾ ನದಿ ನೀರನ್ನೇ ಕುಡಿದು ಬೆಳೆದಿದ್ದೇವೆ. ಆದರೆ, ಅದು ಸೌಜನ್ಯವಲ್ಲ. ಈಚೆಗೆ ಬಿಜೆಪಿ ರಾಷ್ಟ್ರೀಯ ನಾಯಕ ಅರುಣಸಿಂಗ್ ವಿಜಯಪುರಕ್ಕೆ ಬಂದಾಗ ಸೌಜನ್ಯಯುತವಾಗಿ ಭೇಟಿ ಮಾಡಿದರೆ ಅವರ ಬಗ್ಗೆ ಲೂಸ್ ಆಗಿ ಮಾತನಾಡೋದು, ಮೊನ್ನೆಯಷ್ಟೇ ಮಾಧ್ಯಮದವರು ಮುರುಗೇಶ ನಿರಾಣಿ, ನಡ್ಡಾಜಿ, ಅರುಣ್​ ಸಿಂಗ್ ಹಾಗೂ ರಾಜ್ಯಾಧ್ಯಕ್ಷರನ್ನು ಕರೆದುಕೊಂಡು ಹರಿಹರ ಪೀಠಕ್ಕೆ ಭೇಟಿ ನೀಡುತ್ತಿದ್ದಾರೆಂದು ವಿಷಯ ಪ್ರಸ್ತಾಪಿಸಿದರೆ ‘ಹರಿಹರಪೀಠಕ್ಕಾದರೂ ಹೋಗಲಿ ಸುಡುಗಾಡಿಗಾದರೂ ಹೋಗಲಿ’ ಎನ್ನುತ್ತೀರಿ, ಯಾರ ಬಗ್ಗೆ ಮಾತನಾಡುತ್ತೀರಿ? ನೀವು ಯಾವ ಪಕ್ಷದಲ್ಲಿದ್ದೀರಿ? ಯಾರಿಂದ ಆರಿಸಿ ಬಂದಿದ್ದೀರಿ? ಈ ಪಕ್ಷದಿಂದಲೇ ನಿಮಗೊಂದು ಹೆಸರಿದೆಯಲ್ಲವಾ? ಎರಡು ನಾಲಿಗೆ ಇದೆಯಲ್ಲ ನಿಮಗೆ? ಯಾವಾಗಲು ಬೇರೆಯವರ ಬಗ್ಗೆ ಮಾತನಾಡುವಾಗ ಒಂದು ಬೆರಳು ಅವರ ಕಡೆ ಇದ್ದರೆ ನಾಲ್ಕು ಬೆರಳು ನಮ್ಮ ಕಡೆ ಇರಲಿದೆ ಎಂಬುದು ಗಮನದಲ್ಲಿರಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಹಿಂದು ಕ್ರಿಶ್ಚಿಯನ್ ಮುಸ್ಲಿಂ ಒಂದೇ ತಾಯಿ ಮಕ್ಕಳಂತೆ ಬಾಳಬೇಕೆಂದು ಹೇಳಿದ್ದರು. ಯಾವ ಸಮಾಜಕ್ಕೂ ನಮ್ಮಿಂದ ಅನ್ಯಾಯ ಆಗಬಾರದು ಎಂದಿದ್ದರು. ಆ ಸಿದ್ದಾಂತ ಬಿಜೆಪಿಯಲ್ಲಿನ್ನೂ ಇದೆ. ಆದರೆ, ನೀವು ಬೇರೆ ಪಕ್ಷದಲ್ಲಿದ್ದಾಗ ಟೊಪ್ಪಿಗೆ ಹಾಕೋದು, ಈ ಕಡೆ ಬಂದಾಗ ಮತ್ತೊಂದು ಮಾತನಾಡಿದರೆ ಜನ ಪಾಠ ಕಲಿಸುತ್ತಾರೆ ಎಂದರು.

ಬದ್ಧತೆಯ ರಾಜಕಾರಣ:
ಮುರುಗೇಶ ನಿರಾಣಿಗೆ ಶಿಸ್ತು, ಪ್ರಾಮಾಣಿಕತೆ ಮತ್ತು ಬದ್ಧತೆ ಇದೆ. ಅದೇ ಕಾರಣಕ್ಕೆ ನಿರಂತರವಾಗಿ ಮಂತ್ರಿಯಾಗುತ್ತಿದ್ದೇನೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಮಂತ್ರಿಯಾಗಿದ್ದೇನೆ. ಒಂದು ಚಿಕ್ಕ ಕಾರ್ಖಾನೆಯನ್ನು ದೇಶದ ಎರಡನೇ ಅತೀ ಹೆಚ್ಚು ಸಕ್ಕರೆ ಉತ್ಪಾದಿಸುವ ಕಾರ್ಖಾನೆಯನ್ನಾಗಿ ಮಾಡಿದ್ದೇನೆ. ಸಂಘ ಸಂಸ್ಥೆ ಮಾಡಿ ಅದರಲ್ಲಿ ದೊಡ್ಡ ವಾಹನ ಖರೀದಿಸಿ ಅಡ್ಡಾಡುವ ಕೆಲಸ ಮಾಡಿಲ್ಲ. ಲೋನ್ ತೆಗೆದು ಕೈ ಎತ್ತಿ ಓಡಿ ಹೋಗಿಲ್ಲ ಎಂದು ಕುಟುಕಿದರು.

ನಿನಗೆ ತಾಕತ್ತಿದ್ದರೆ ನಿನ್ನ ಚುನಾವಣೆಯಲ್ಲಿ ನೀನು ಮಾಡು, ನನ್ನ ಚುನಾವಣೆಯಲ್ಲಿ ನಾನು ಮಾಡುತ್ತೇನೆ. ಅದನ್ನು ಬಿಟ್ಟು ಇಲ್ಲಸಲ್ಲದ ಮಾತು ಬೇಡ. 2010ರಲ್ಲಿ ಬಬಲೇಶ್ವರದಲ್ಲಿ 1 ಲಕ್ಷ ಜನ ಸೇರಿಸಿ ಎರಡು ಪೀಠ ಸೇರಿಸಬೇಕೆಂದು ಶಾಂತಿಯುತವಾಗಿ ಜನ ಸೇರಿಸಿದಾಗ ನಿನ್ನ ಬಂಡವಾಳ ಎಷ್ಟಿತ್ತು? ಗಂಟೆಗಟ್ಟಲೆ ಸಮಾಜದ ಬಗ್ಗೆ ಮಾತನಾಡದೆ ರಾಜಕಾರಣದ ಬಗ್ಗೆ ಮಾತನಾಡಿದಿ. ಮಹಾಲಿಂಗಪುರ, ಜಮಖಂಡಿಯಲ್ಲಿ ಹೀಗೆ ಆಯಿತು. ಬರೀ ರಾಜಕಾರಣಕ್ಕಾಗಿ ಮಾತನಾಡೋದು. ಸಮಾಜ ಪಟ್ಟಿಹಾಕಿ ಕಾರ್ಯಕ್ರಮ ಮಾಡಿದ್ರು. ಅಲ್ಲಿ ವೈಯಕ್ತಿಕ ಮಾತನಾಡೋದು. ಆಡಳಿತ ಪಕ್ಷದ ಶಾಸಕನಾಗಿ ಏನಾದರೂ ಹೇಳಬೇಕಾ ಸಲಹೆ ಕೊಡು ಸ್ವೀಕರಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net