

ಬೆಂಗಳೂರು: ಭದ್ರಾವತಿಯಲ್ಲಿ ನನ್ನ ಹಾಗೂ ನನ್ನ ಮಗನ ಮೇಲೆ ಪೊಲೀಸರು ಕೊಲೆ ಕೇಸ್ ಹಾಕಿದ್ದಾರೆ. ವಿಧಾನಸಭೆಯಲ್ಲಿ ಅಮಾನತು ಮಾಡಿದ್ದಾರೆ. ಈ ಮೂಲಕ ಭದ್ರಾವತಿಯಲ್ಲಿ ಬಿಜೆಪಿ ಬೆಳೆಸಲು ಬಿವೈ ರಾಘವೇಂದ್ರ ಹಾಗೂ ಕೆಎಸ್ ಈಶ್ವರಪ್ಪ ಸಂಚು ನಡೆಸಿದ್ದಾರೆ ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಆರೋಪಿಸಿದ್ದಾರೆ.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರ ಹಾಕಿ ಮಾತನಾಡಿದ ಅವರು, ಭದ್ರಾವತಿಯಲ್ಲಿ ಚುನಾವಣೆ ಗೆದ್ದ ಇತಿಹಾಸ ಬಿಜೆಪಿಗಿಲ್ಲ. ಇಂತಹ ಷಡ್ಯಂತ್ರ ಮಾಡಿ ಬಿಜೆಪಿಯವರು ವಿಷಬೀಜ ಬಿತ್ತೋಕೆ ಹೊರಟಿದ್ದಾರೆ. ಸಿಎಂ, ರಾಘವೇಂದ್ರ, ಈಶ್ವರಪ್ಪ ಸಣ್ಣತನ ಮಾಡ್ತಿದ್ದಾರೆ. ಇವರಿಂದ ಶಿವಮೊಗ್ಗ ಜಿಲ್ಲೆ ಜನ ಅಸಹ್ಯ ಪಡ್ತಿದ್ದಾರೆ ಎಂದರು.
ಸ್ಪೀಕರ್ ನಮಗೆ ನ್ಯಾಯ ಕೊಡಿಸಬೇಕು. ಇನ್ನೇನು ಕೆಲವೇ ದಿನಗಳಲ್ಲಿ ಈ ಸರ್ಕಾರದ ಹಗರಣ ಹೊರಬರುತ್ತವೆ. ಈ ಸರ್ಕಾರ ಬಿದ್ದು ಹೋಗುತ್ತೆ. ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ ಎಂದರು. ಮುಂಗಳವಾರ ನಾವು ಎಸ್ ಪಿ ಕಚೇರಿ ಮುಂದೆ ಪ್ರತಿಭಟಿಸ್ತೇವೆ. ಬಿ.ಎಸ್. ವೈ, ರಾಘವೇಂದ್ರ, ಈಶ್ವರಪ್ಪ ಹಗರಣ ನನಗೆ ಗೊತ್ತಿದೆ. ಮುಂದೆ ಎಲ್ಲ ಹಗರಣ ಬಯಲು ಮಾಡುತ್ತೇನೆ ಎಂದರು.
ಇದೇ ವೇಳೆ ಮಾತನಾಡಿದ ಗಾಣಿಗ ಸಮುದಾಯದ ಪೀಠಾಧಿಪತಿ ಮಲ್ಲಿನಾಥ ಶ್ರೀ, ಭದ್ರಾವತಿಯಲ್ಲಿ ಬಿಜೆಪಿಗೆ ಕ್ಯಾಂಡಿಡೇಟ್ ಇಲ್ಲ. ಹೀಗಾಗಿ ಅಲ್ಲಿ ಷಢ್ಯಂತ್ರ ಮಾಡಲಾಗಿದೆ. ಶಾಸಕರ ಪುತ್ರನನ್ನು ಕೂಡಲೇ ರಿಲೀಸ್ ಮಾಡಬೇಕು. ಸಂಗಮೇಶ್ ಕುಟುಂಬದ ಕೇಸ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಭದ್ರಾವತಿಯಲ್ಲಿ ಬಿ ಕೆ ಸಂಗಮೇಶ್ ಬೆಂಬಲಿಗರ ಹಾಗೂ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ಇಲ್ಲವಾದರೆ ರಾಜ್ಯಾಧ್ಯಂತ ಹೋರಾಟ ಮಾಡುತ್ತೇವೆ ಎಂದು ಶ್ರೀಗಳು ಎಚ್ಚರಿಸಿದರು.