ಹೆಜ್ಜೆಹೆಜ್ಜೆಗೂ ಅಡ್ಡಗಾಲು ಹಾಕುತ್ತಿದ್ದ ಸಾಬೂನನ್ನು ಮುಗಿಸಿಯೇ ಬಿಟ್ಟರು!

bangalore murdar
Published on

ಬೆಂಗಳೂರು: ಯಾವ ಕೆಲಸ ಮಾಡಲು ಮುಂದಾದರೂ ಅಡ್ಡಗಾಲು ಹಾಕುತ್ತಿದ್ದ ವ್ಯಕ್ತಿಯೊಬ್ಬನನ್ನು ಆತನ ಹಳೆಯ ಪರಿಚಿತರೇ ಕೊಲೆ ಮಾಡಿದ್ದಾರೆ.

ಜಲ್ಲಿ ಕಲ್ಲು ಕ್ರಷರ್ ವ್ಯವಹಾರ ಮಾಡಿಕೊಂಡಿದ್ದ ಆವಲಹಳ್ಳಿ ನಿವಾಸಿ ಸಾಬೂ (38) ಕೊಲೆಯಾದ ವ್ಯಕ್ತಿ. ಈತನ ಕುಟುಂಬ ಮತ್ತು ಚಾಂದ್ ಪಾಷಾ ಎಂಬಾತನ ಕುಟುಂಬದ ನಡುವೆ ಮೊದಲಿನಿಂದಲೂ ಸಣ್ಣಪುಟ್ಟ ವಿಷಯಗಳಿಗೆ ಜಗಳ ನಡೆದು ದ್ವೇಷ ಮುಂದುವರಿದಿತ್ತು. ಹಲವು ಬಾರಿ ಇಬ್ಬರ ನಡುವೆ ಜಗಳ ನಡೆದಿತ್ತು.

ಅಲ್ಲದೆ, ಗಲಾಟೆ ವಿಚಾರವೊಂದಕ್ಕೆ ಚಾಂದ್‌ಪಾಷನ ವಿರುದ್ಧ ತಲಘಟ್ಟಪುರ ಠಾಣೆಯಲ್ಲಿ ರೌಡಿಪಟ್ಟಿಯನ್ನು ಸಾಬೂ ತೆರೆಸಿದ್ದ. ಚಾಂದ್ ಯಾವುದೇ ಕೆಲಸ ಮಾಡಲು ಮುಂದಾದರೂ ಸಾಬೂ ಅಡ್ಡಗಾಲು ಹಾಕುತ್ತಿದ್ದ. ಇದೇ ವಿಚಾರಕ್ಕೆ ಸಾಬೂ ಮೇಲೆ ಚಾಂದ್‌ಗೆ ಇನ್ನಷ್ಟು ಆಕ್ರೋಶ ಬೆಳೆದಿತ್ತು.

ಗುರುವಾರ ರಾತ್ರಿ 11 ಗಂಟೆಯಲ್ಲಿ ಸಾಬೂ ಬೈಕ್‌ನಲ್ಲಿ ಆವಲಹಳ್ಳಿಗೆ ತೆರಳುತ್ತಿದ್ದಾಗ ಕಾರಿನಲ್ಲಿ ಚಾಂದ್ ಪಾಷಾ ಮತ್ತು ಆತನ ಸಹಚರರು ಹಿಂಬಾಲಿಸಿದ್ದಾರೆ. ಬೈಕ್‌ಗೆ ಕಾರನ್ನು ಡಿಕ್ಕಿ ಹೊಡೆದು ಬೀಳಿಸಿದ್ದಾರೆ. ನಂತರ ಮಾರಕಾಸಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಾಬೂ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪ್ರಕರಣದ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರಿಗೆ, ಆರೋಪಿಗಳು ಮನೆಯೊಂದರಲ್ಲಿ ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಚಾಂದ್ ಪಾಷಾ (30), ಸಲ್ಮಾನ್ (32), ಸೈಯದ್ ವಾಸಿಂ (31), ಇಮ್ರಾನ್ (29), ಮುಜಾರ್ ಪಾಷಾ (32) ಹಾಗೂ ಅಜಾಂ (30) ಬಂಧಿತರು. ಅವರನ್ನೆಲ್ಲ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net