ಬಿಡಾಡಿ ದನಗಳ ಮಾಲೀಕರಿಗೆ ದಂಡದ ಬಿಸಿ ಮುಟ್ಟಿಸಿದ ನಗರಸಭೆ

8-KGL-3,,,,
ಕೊಳ್ಳೇಗಾಲ ನಗರಸಭೆ ಕಚೇರಿ ಪಾರ್ಕಿಂಗ್ ಸ್ಥಳದಲ್ಲಿ ವಶಕ್ಕೆ ಪಡೆದ ಬಿಡಾಡಿ ದನಗಳನ್ನು ಕಟ್ಟಿರುವುದು.
Published on

ಕೊಳ್ಳೇಗಾಲ: ಸಾರ್ವಜನಿಕ ಸ್ಥಳದಲ್ಲಿ ಅಡ್ಡಾಡುತ್ತಿದ್ದ ಬಿಡಾಡಿ ದನಗಳ ವಶಕ್ಕೆ ಪಡೆದು ಪಿಂಜರಾಪೋಲ್‌ಗೆ ಕಳುಹಿಸುವ ಮುನ್ನವೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಣ್ತಪ್ಪಿಸಿ ದನ, ಹಸುಗಳನ್ನು ಹೊಡೆದುಕೊಂಡು ಹೋಗಿದ್ದ ಮಾಲೀಕರ ಪತ್ತೆ ಹಚ್ಚಿ ದಂಡ ಕಟ್ಟಿಸಲಾಗಿದೆ.

ನಗರಸಭೆ ಪೌರಾಯುಕ್ತ ಎ.ರಮೇಶ್ ಸೂಚನೆಯಂತೆ ಹೆಲ್ತ್ ಇನ್‌ಸ್ಪೆಕ್ಟರ್ ಚೇತನ್ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ನಗರಸಭೆ ಹೊರಗುತ್ತಿಗೆ ಸೂಪರ್‌ವೈಸರ್‌ಗಳು, ಪೌರ ಕಾರ್ಮಿಕರು, ಪಟ್ಟಣದ ಸಾರ್ವಜನಿಕ ಸ್ಥಳ ಹಾಗೂ ರಸ್ತೆಗಳಲ್ಲಿ ಜನರು ಹಾಗೂ ವಾಹನ ಸಂಚಾರಕ್ಕೆ ತೊಂದರೆ ನೀಡುವ ಬಿಡಾಡಿ ದನಗಳನ್ನು ಹಿಡಿದು ಪಿಂಜರಾಪೋಲಿಗೆ ರವಾನಿಸುವ ಕಾರ್ಯಾಚರಣೆ ಕೈಗೊಂಡಿದ್ದರು.

ಈ ವೇಳೆ ಸಾರ್ವಜನಿಕ ಸ್ಥಳದಲ್ಲಿ ದೊರೆತ 7 ಬಿಡಾಡಿ ದನಗಳನ್ನು ಸುಮಾರು 9.30 ಗಂಟೆ ಸಮಯದಲ್ಲಿ ನಗರಸಭೆ ಕಾರ್ಯಾಲಯದ ಪಾರ್ಕಿಂಗ್ ಗೇಟ್ ಒಳಗೆ ಸ್ಥಳದಲ್ಲಿ ಕಟ್ಟಿ ಹಾಕಲಾಗಿತ್ತು. ಬಳಿಕ 2 ಗಂಟೆಯ ನಂತರ ಕಚೇರಿಯ ಕೆಳಗೆ ಕಟ್ಟಿದ್ದ ದನಗಳು ಹಾಗೂ ಹಸುಗಳನ್ನು ಹಗ್ಗ ಬಿಚ್ಚಿಕೊಂಡು ಕರೆದೊಯ್ದಿದ್ದರು.

ವಶಕ್ಕೆ ಪಡೆದ ಬಿಡಾಡಿ ದನಗಳ ಕಾಯಬೇಕಿದ್ದ ಸಿಬ್ಬಂದಿ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದ್ದು. ಬಿಡಾಡಿ ದನಗಳನ್ನು ಪಿಂಜರಾಪೋಲ್‌ಗೆ ಬಿಡುವ ಮುನ್ನವೇ ನಗರಸಭೆ ಪಾರ್ಕಿಂಗ್ ಗೇಟ್ ತೆರೆದು ಹೊರ ಕಳುಹಿಸಿದವರು ಯಾರು? ಎಂಬುದು ತೀವ್ರ ಚರ್ಚೆಗೀಡಾಗಿದ್ದು ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರು ಅಸಮಾಧನ ವ್ಯಕ್ತಪಡಿಸಿದರು.

ಇದರಿಂದ ನಗರಸಭೆ ಕಾರ್ಯಾಚರಣೆ ವಿಫಲವಾದಂತೆ ಆಗಿದ್ದು ಅಧಿಕಾರಿಗಳು ನಗೆಪಾಟಲಿಗೀಡಾಗಿದ್ದರು. ಈ ಬಗ್ಗೆ ಪೌರಾಯುಕ್ತ ಎ.ರಮೇಶ್ ಅವರು ನಾಲ್ವರು ನಗರಸಭೆ ಸೂಪರ್‌ವೈಸರ್‌ಗಳನ್ನು ತರಾಟೆಗೆ ತೆಗೆದುಕೊಂಡು ನೋಟಿಸ್ ನೀಡಿದ್ದರು. ಇದಾದ ಕೆಲವೇ ಸಮಯದಲ್ಲಿ ವಶಕ್ಕೆ ಪಡೆದಿದ್ದ ಬಿಡಾಡಿ ದನಗಳ ಮಾಲೀಕರನ್ನು ಪತ್ತೆ ಹಚ್ಚಿದ ಸೂಪರ್‌ವೈಸರ್‌ಗಳು 1 ಹಸುವಿಗೆ ತಲಾ 5 ಸಾವಿರ ರೂ.ಗಳಂತೆ ಒಟ್ಟು 7 ಹಸುಗಳ ಮಾಲೀಕರಿಗೆ ದಂಡ ವಿಧಿಸಿದ್ದಾರೆ. ಹೊಸ ಕುರುಬರ ಬೀದಿಯ ನಿವಾಸಿ ಶಾಂತಮ್ಮ ಎಂಬುವರ 1 ಹಸು, ಶಾಂತರಾಜುಗೆ ಸೇರಿದ 1 ಹಸು, ಹಳೇ ಕುರುಬರ ಬೀದಿಯ ರಮೇಶ್ ಅವರ 3 ಹಸುಗಳು, ನಾಯಕರ ಚಿಕ್ಕ ಬೀದಿಯ ನಾಗೇಂದ್ರ ಎಂಬುವರ 2 ಹಸುಗಳಿಗೆ ದಂಡದ ಬಿಸಿ ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net