ಸಂಚಾರಿ ಪೇದೆಯ ಯೂನಿಫಾರ್ಮ್​ ಹಿಡಿದು ಥಳಿಸಿದ ಮಹಿಳೆಯ ಬಂಧನ..!

Woman
Published on

ಮುಂಬೈ: ಕರ್ತವ್ಯನಿರತ ಸಂಚಾರಿ ಪೊಲೀಸ್​ ಮೇಲೆ ಹಲ್ಲೆ ಮಾಡಿದ ಮಹಿಳೆಯನ್ನು ಬಂಧಿಸಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಎಲ್​ಟಿ ಮಾರ್ಗ್​ ಠಾಣಾ ಪೊಲೀಸರು ಶುಕ್ರವಾರ 29 ವರ್ಷದ ಸಂಗರಿಕಾ ತಿವಾರಿ ಎಂಬಾಕೆಯನ್ನು ಬಂಧಿಸಿದ್ದಾರೆ. ಕಾಲ್ಬದೇವಿಯಲ್ಲಿರುವ ಸುರ್ತಿ ಹೋಟೆಲ್​ ಬಳಿ ಕರ್ತವ್ಯದಲ್ಲಿದ ಸಂಚಾರಿ ಕಾನ್​​ಸ್ಟೇಬಲ್​ ಏಕನಾಥ್​ ಪಾರ್ತೆ ಎಂಬುವರ ಮೇಲೆ ಹಲ್ಲೆ ಮಾಡಿದ್ದಕ್ಕೆ ಬಂಧಿಸಲಾಗಿದೆ.

ದೂರಿನ ಪ್ರಕಾರ ಬಂಧಿತ ತಿವಾರಿ 32 ವರ್ಷದ ಮೋಹ್ಸಿನ್​​ ಶೇಕ್​ ಎಂಬುವರ ಬೈಕಿನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತು ಬರುತ್ತಿದ್ದರಂತೆ. ಈ ವೇಳೆ ಅವರನ್ನು ತಡೆದ ಪೇದೆ, ಹೆಲ್ಮೆಟ್​ ಧರಿಸಿಲ್ಲ ಎಂದು ದಂಡ ಹಾಕಿದ್ದಾರೆ. ಇದೇ ವಿಚಾರ ವಾಗ್ವಾದ ನಡೆದಿದೆ. ಗಲಾಟೆ ತಾರಕಕ್ಕೇರಿದಾಗ ತಿವಾರಿ ಪೇದೆ ಪಾರ್ತೆ ಅವರ ಯೂನಿಫಾರ್ಮ್​ಗೆ ಕೈಹಾಕಿ ಎಳೆದಾಡಿ ಹಲ್ಲೆ ಮಾಡಿದ್ದಾರೆ. ಪ್ರಕರಣ ಸಹ ಆರೋಪಿಯಾಗಿರುವ ಶೇಖ್​ ಘಟನೆಯನ್ನು ವಿಡಿಯೋ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಆದರೆ, ತಿವಾರಿ ಪ್ರಕಾರ ಸಂಚಾರಿ ಪೇದೆ ಕೆಟ್ಟ ಪದಗಳಿಂದ ನಿಂದಿಸಿದರು. ಹೀಗಾಗಿ ಹಲ್ಲೆ ಮಾಡಬೇಕಾಯಿತು ಎಂದು ಪ್ರತ್ಯಾರೋಪ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಜಗಳವನ್ನು ಬಿಡಿಸಿ, ತಿವಾರಿ ಮತ್ತು ಶೇಖ್​ನನ್ನು ಠಾಣೆಗೆ ಕರೆತಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net