

ಮುಂಬೈ: ದೇಶಾದ್ಯಂತ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಮುಂಬೈ ಪೊಲೀಸರು ಕೂಡ ಕೋವಿಡ್-19 ಹಾವಳಿಗೆ ತತ್ತರಿಸಿಹೋಗಿದ್ದಾರೆ. ಅದರಲ್ಲೂ ಒಂದೇ ದಿನದಲ್ಲಿ ಸೋಂಕಿಗೆ ಒಳಗಾಗಿರುವ ಪೊಲೀಸರ ಸಂಖ್ಯೆ ಉಳಿದ ಪೊಲೀಸರನ್ನು ಆತಂಕಕ್ಕೆ ಈಡಾಗಿಸಿದ್ದರೂ ಅಚ್ಚರಿಯೇನಿಲ್ಲ.
ಇತ್ತೀಚಿನ 24 ಗಂಟೆಗಳ ಅವಧಿಯಲ್ಲಿ ಮುಂಬೈ ಪೊಲೀಸರ ಪೈಕಿ 253 ಮಂದಿ ಸೋಂಕಿಗೆ ಒಳಗಾಗಿದ್ದರೆ, ಐವರು ಕೋವಿಡ್-19ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಮುಂಬೈ ಪೊಲೀಸರಲ್ಲಿ ಒಟ್ಟು 21,827 ಮಂದಿ ಸೋಂಕಿಗೆ ಒಳಗಾದಂತಾಗಿದ್ದು, ಆ ಪೈಕಿ 18,158 ಮಂದಿ ಗುಣವಾಗಿದ್ದಾರೆ. ಅಲ್ಲದೆ ಇದುವರೆಗೆ ಕರೊನಾ ಸೋಂಕಿಗೆ ಬಲಿಯಾದ ಮುಂಬೈ ಪೊಲೀಸರ ಸಂಖ್ಯೆ 234ಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಮುಂಬೈ ಪೊಲೀಸರು ಕರೊನಾ ನಿಯಮ ಉಲ್ಲಂಘಿಸಿದ 2,67,044 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದು, 895 ಜನರನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಪ್ರಕರಣದಲ್ಲಿ 360 ಕೇಸ್ಗಳನ್ನು ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್)