

ಮುಂಬೈ: ಪ್ರಧಾನಿ ಮೋದಿ(PM Modi) ಅವರನ್ನು ಕೊಲ್ಲುವುದಾಗಿ ಮುಂಬೈ ಪೊಲೀಸರಿಗೆ ಶನಿವಾರ(ಡಿಸೆಂಬರ್ 7) ಸಂದೇಶ ಬಂದಿದೆ. ಮುಂಬೈ ಟ್ರಾಫಿಕ್ ಪೊಲೀಸರ ಸಹಾಯವಾಣಿಯಲ್ಲಿ ಬಂದಿರುವ ಈ ಸಂದೇಶದಲ್ಲಿ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯ (ಐಎಸ್‌ಐ) ಇಬ್ಬರು ಏಜೆಂಟರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂದು ಬರೆಯಲಾಗಿದೆ.
ಸಂದೇಶ ಬಂದ ತಕ್ಷಣ ಮುಂಬೈ ಪೊಲೀಸ್ ತಂಡ ಅಲರ್ಟ್ ಆಗಿದ್ದು, ಬೆದರಿಕೆ ಸಂದೇಶದ ಬಂದ ಸಂಖ್ಯೆಯನ್ನು ತನಿಖೆ ಮಾಡಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಖ್ಯೆ ಅಜ್ಮೀರ್ ರಾಜಸ್ಥಾನಕ್ಕೆ ಸೇರಿದ್ದು ಎಂದು ತಿಳಿದು ಬಂದಿದೆ. ರಾಜಸ್ಥಾನದಿಂದ ಬಂದ ಮೆಸೇಜ್ ಎಂದು ತಿಳಿದಾಕ್ಷಣವೇ ಅನುಮಾನಾಸ್ಪದ ವ್ಯಕ್ತಿಯನ್ನು ಬಂಧಿಸಲು ನಮ್ಮ ತಂಡವೊಂದು ರಾಜಸ್ಥಾನಕ್ಕೆ ತೆರಳಿದೆ.
ನಮ್ಮ ಸಂಚಾರ ನಿಯಂತ್ರಣ ತಂಡದ ಸಹಾಯವಾಣಿಗೆ ಮುಂಜಾನೆಯೇ ಈ ಬೆದರಿಕೆ ಸಂದೇಶ ಬಂದಿದೆ. ಈ ಸಂದೇಶದಲ್ಲಿ ಇಬ್ಬರು ಐಎಸ್‌ಐ ಏಜೆಂಟ್‌ಗಳಿಂದ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ತಿಳಿಸಲಾಗಿದೆ. ಈ ವಾಟ್ಸ್ಆ್ಯಪ್ ಸಂದೇಶದ ಪ್ರಕಾರ ಇಬ್ಬರೂ ಏಜೆಂಟ್ಗಳು ಪ್ರಧಾನಿ ಮೋದಿ ಅವರನ್ನು ಬಾಂಬ್ನಿಂದ ಸ್ಫೋಟಿಸಲು ಯೋಜಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬೆದರಿಕೆ ಹಾಕುವ ವ್ಯಕ್ತಿ ಮಾನಸಿಕವಾಗಿ ತೊಂದರೆಗೀಡಾಗಿರಬಹುದು ಅಥವಾ ಮದ್ಯದ ಅಮಲಿನಲ್ಲಿ ಇರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ಈ ವಿಚಾರದಲ್ಲಿ ಇನ್ನೂ ತನಿಖೆ ನಡೆಯುತ್ತಿದೆ. ಆದರೂ ಸಂಬಂಧಿತ ಭಾರತೀಯ ನ್ಯಾಯಾಂಗ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಬೆದರಿಕೆ ಸಂದೇಶ ಕಳುಹಿಸಿರುವ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಕಳೆದ 10 ದಿನಗಳಲ್ಲಿ ಮುಂಬೈ ಸಂಚಾರ ಪೊಲೀಸರಿಗೆ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ 2 ಸಂದೇಶಗಳು ಬಂದಿದ್ದವು. ಇತ್ತೀಚಿಗೆ ಕಳುಹಿಸಲಾದ ಸಂದೇಶವು ‘ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ, ಅವರು ದೇವಸ್ಥಾನಕ್ಕೆ (ರಾಜಸ್ಥಾನದ ಬಿಷ್ಣೋಯಿ ಸಮುದಾಯದ ದೇವಸ್ಥಾನ) ಹೋಗಿ ಸಮುದಾಯದ ಕ್ಷಮೆಯಾಚಿಸಬೇಕು ಅಥವಾ 5 ಕೋಟಿ ರೂಪಾಯಿ ಪಾವತಿಸಬೇಕು ಎಂದಿತ್ತು.(ಏಜೆನ್ಸೀಸ್)