Spit Bin ಅಳವಡಿಸಿದ Mumbai Metro ನಿಗಮ; 'ಸಾರ್ವಜನಿಕವಾಗಿ ಉಗುಳಲು ನೀಡುತ್ತಿರುವ ಉತ್ತೇಜನ' ಎಂದು ಪ್ರಯಾಣಿಕರಿಂದ ಆಕ್ಷೇಪ

Spit Bin ಅಳವಡಿಸಿದ Mumbai Metro ನಿಗಮ; 'ಸಾರ್ವಜನಿಕವಾಗಿ ಉಗುಳಲು ನೀಡುತ್ತಿರುವ ಉತ್ತೇಜನ' ಎಂದು  ಪ್ರಯಾಣಿಕರಿಂದ ಆಕ್ಷೇಪ
Published on: 
  • ಸಾರ್ವಜನಿಕವಾಗಿ ಉಗುಳುವಿಕೆ ತಡೆಯಲು ಮುಂಬೈ ಮೆಟ್ರೋ ನಿಲ್ದಾಣವೊಂದರಲ್ಲಿ ಹೊಸ ಪ್ಲ್ಯಾನ್​

  • ಸ್ಪಿಟ್​ ಬಿನ್​ ಅಳವಡಿಸಿದ ಮೆಟ್ರೋ ನಿಗಮ

  • ನಾಳೆ ಅದರ ಸುತ್ತಲೂ ಉಗಿದಿರುತ್ತಾರೆ, ಇದು ಉಗಿಯಲು ನೀಡುತ್ತಿರುವ ಉತ್ತೇಜನ ಎಂದು ನೆಟ್ಟಿಗರು ಹೇಳಿದ್ದಾರೆ

ಮುಂಬೈ: ಭಾರತದಲ್ಲಿಮ ಸಾರ್ವಜನಿಕ ರಸ್ತೆಗಳು, ನಿಲ್ದಾಣಗಳಲ್ಲಿ ಪಾನ್​, ಗುಟ್ಕಾ, ಬಾಯಿ ಮುಕ್ಕಳಿಸಿದ ನೀರು, ಎಂಜಲು ಉಗಿಯುವುದು ಕಂಡು ಬರುತ್ತದೆ. ಈ ಸಮಸ್ಯೆ ಮೆಟ್ರೋಗೂ ತಪ್ಪಿಲ್ಲ. ಹೀಗಾಗಿ ಮುಂಬೈ ಮೆಟ್ರೋ ರೈಲು ನಿಗಮವು ಹೊಸ ಪ್ಲ್ಯಾನ್​ ಅನ್ನು ಜಾರಿ ಮಾಡಿದೆ.

ಸ್ಪಿಟ್ ಬಿನ್​ ಅಳವಡಿಕೆ

ಹೌದು, ಮುಂಬೈ ಮೆಟ್ರೋ ನಿಲ್ದಾಣವೊಂದರಲ್ಲಿ ಅಲ್ಲಲ್ಲಿ ಉಗುಳುವುದನ್ನು ತಪ್ಪಿಸಲು, Spit Bin ಅನ್ನು ತಂದಿಡಲಾಗಿದೆ. ಭಾರತೀಯರು ಅಲ್ಲಲ್ಲಿ ಉಗುಳುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗೋದಿಲ್ಲ ಎನ್ನುವುದನ್ನು ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ಅರ್ಥ ಮಾಡಿಕೊಂಡು ಈ ಹೊಸ ಪ್ರಯತ್ನವನ್ನು ಜಾರಿ ಮಾಡಿದೆ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ. ಇನ್ನೂ ಕೆಲವರು ಉಗಿಯಲು ಮತ್ತಷ್ಟು ಉತ್ತೇಜನ ಕೊಡುತ್ತಿರುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ.

ಝೋರು ಬತೇನಾ ಎಂಬುವವರು ಎಕ್ಸ್​ನಲ್ಲಿ, 'ನಮ್ಮ ಮುಂಬೈ ಮೆಟ್ರೋ, ಈಗ ಮೀಸಲು ಉಗುಳುವ ವಲಯಗಳೊಂದಿಗೆ' ಎಂಬ ಶೀರ್ಷಿಕೆಯೊಂದಿಗೆ ಸ್ಪರ್ಶರಹಿತ ಸ್ಪಿಟ್​​ ಬಿನ್ ಇರುವ ಫೋಟೋ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಉಗುಳಲು ವಿಶ್ವದ ಮೊದಲ ನಿರ್ದಿಷ್ಟ ಸ್ಥಳ ಎಂದು ಬರೆಯಲಾಗಿದೆ. ಜೊತೆಗೆ ಅದನ್ನು ಬಳಕೆ ಮಾಡುವ ಬಗ್ಗೆ ಮರಾಠಿ ಹಾಗೂ ಇಂಗ್ಲಿಷ್​ನಲ್ಲಿ ವಿವರಿಸಲಾಗಿದೆ. ಸಾರ್ವಜನಿಕವಾಗಿ ಉಗುಳುವ ಸಮಸ್ಯೆಯನ್ನು ಎದುರಿಸಲು ‘ಎಝಿಸ್ಪಿಟ್’ ಎಂಬ ಕಂಪನಿ ಸ್ಪರ್ಶ ರಹಿತ ಉಗುಳುವ ಈ ಯಂತ್ರವನ್ನು ಆವಿಷ್ಕಾರ ಮಾಡಿದೆ.

ಮಿಶ್ರ ಪ್ರತಿಕ್ರಿಯೆ ವ್ಯಕ್ತ

ಹಲವರು ಸೋಶಿಯಲ್​ ಮೀಡಿಯಾ ಬಳಕೆದಾರರು ಈ ಆವಿಷ್ಕಾರವನ್ನು ಕೊಂಡಾಡಿದರೆ, ಇನ್ನೂ ಕೆಲವರು ಇದನ್ನು ಹಾಸ್ಯವಾಗಿ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಇಂತಹ ನಾವಿನ್ಯತೆ ಆವಿಷ್ಕಾರ ಬಹಳ ವರ್ಷದ ಹಿಂದೆಯೇ ಆಗಬೇಕಿತ್ತು ಎಂದು ಹೇಳಿದ್ದಾರೆ. ಮತ್ತಷ್ಟು ಜನರು ಅವರದ್ದೇ ನಿಯಮದ ವಿರುದ್ಧ ಅಪಹಾಸ್ಯ ಮಾಡಿದ್ದಾರೆ.

ಉಗುಳೋದು ತಪ್ಪು

'ಮತ್ತೊಬ್ಬರು ಭಾರತದಲ್ಲಿ ಆಧುನಿಕ ಸಮಸ್ಯೆ ಇದೆ. ಹೀಗಾಗಿ ಉಗುಳಲು ಮೊದಲ ಸ್ಥಳವನ್ನು ಸ್ಥಳ ಪತ್ತೆ ಹಚ್ಚಲಾಗಿದೆ' ಎಂದು ತಮಾಷೆ ಮಾಡಿದ್ದಾರೆ. 'ಒಂದು ತಿಂಗಳ ನಂತರ ಇದೇ ಸ್ಥಳದ ಚಿತ್ರದಲ್ಲಿ ಕಸದ ತೊಟ್ಟಿಯ ಸುತ್ತಲೂ ಉಗುಳಿರುವುದು ಕಂಡುಬಂದರೆ ನನಗೆ ಆಶ್ಚರ್ಯವಾಗುವುದಿಲ್ಲ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

'ಯಾಕೆ ಉಗುಳೋದಕ್ಕೆ ಜನರಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ನಮ್ಮ ಸುತ್ತ ಏನಾಗ್ತಿದೆ. ಇದು ವಿವೇಕಯುತವಾದ ವ್ಯಕ್ತಿಯ ತಿಳುವಳಿಕೆಯ ನಿರ್ಧಾರವಲ್ಲ' ಎಂದಿದ್ದಾರೆ. 'ಮೊದಲಿಗೆ ಉಗುಳೋದೆ ತಪ್ಪು ಅದ್ರಲ್ಲಿ ಇವರು ಉಗುಳುವುದಕ್ಕೆ ಒಂದು ಸ್ಥಳ ನೇಮಕ ಮಾಡಿರುವುದು ಇನ್ನೂ ತಪ್ಪು ನಾನು 112 ದೇಶ ನೋಡಿದ್ದೇನೆ ಅಲ್ಲೆಲ್ಲಿಯೂ ಸಾರ್ವಜನಿಕವಾಗಿ ಯಾರಾದರೂ ಉಗುಳೋದನ್ನು ನಾನು ನೋಡಿಯೇ ಇಲ್ಲ'ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net