

ಮುಂಬೈ: ತೃತೀಯಲಿಂಗಿಗಳು ಇಂದಿಗೂ ಸಾಕಷ್ಟು ತಾರತಮ್ಯವನ್ನು ಎದುರಿಸುತ್ತಿದ್ದಾರೆ. ತಮ್ಮ ಅಸ್ತಿತ್ವ ಮತ್ತು ಸಮಾನ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಮಂಗಳಮುಖಿಯರ ಸಮುದಾಯದ ಜನರನ್ನು ಸಬಲರನ್ನಾಗಿಸಲು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮುಂಬೈನಲ್ಲಿ ಟ್ರಾನ್ಸ್‌ಜೆಂಡರ್ ಸಲೂನ್ ಪ್ರಾರಂಭಿಸಲಾಗಿದೆ. ಈ ಸಲೂನ್ ಅನ್ನು 7 ಜನ ತೃತೀಯಲಿಂಗಿಗಳು ಸೇರಿ ನಡೆಸಲಿದ್ದಾರೆ.
ಮುಂಬೈನಲ್ಲಿ ಸಲೂನ್ ಒಂದನ್ನು ತೆರೆಯಲಾಗಿದ್ದು, ಇದನ್ನು ಮಂಗಳಮುಖಿಯರೇ ಆರಂಭಿಸಿ ಅವರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಸಮುದಾಯಕ್ಕೆ ಹಣಕಾಸಿನ ಸ್ವಾತಂತ್ರ‍್ಯದ ದಾರಿ ತೋರಿ, ಸಬಲೀಕರಣಗೊಳಿಸಲು ಮಂಗಳಮುಖಿಯರು ಮುಂದಾಗಿದ್ದಾರೆ. ಜ಼ೈನಾಬ್ ಎಂಬ ಮಂಗಳಮುಖಿ ಈ ಸಲೂನ್‌ನ ಮಾಲೀಕರಾಗಿದ್ದಾರೆ.
ಜ಼ೈನಾಬ್ ಮಾತನಾಡಿ, "ತಮ್ಮ ಸಮುದಾಯದ ಮಂದಿಗೆ ಇನ್ನಷ್ಟು ಬಲ ತುಂಬುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ತಮ್ಮ ಸಲೂನ್‌ನಲ್ಲಿ ಮಂಗಳಮುಖಿಯರಿಗೆ ಕೆಲಸದ ತರಬೇತಿ ಕೊಟ್ಟು ವೃತ್ತಿಯ ಅವಕಾಶಗಳನ್ನು ಸೃಷ್ಟಿಸಲಾಗುವುದು. ಡಾಯಿಟ್ಶೆ ಬ್ಯಾಂಕ್ ಹಾಗೂ ಬಾಂಬೆ ರೋಟರಿ ಕ್ಲಬ್ ಸಹಯೋಗದಲ್ಲಿ ಈ ಸಲೂನ್ ಆರಂಭಿಸಲಾಗಿದೆ" ಎಂದು ಹೇಳಿದ್ದಾರೆ.
ತೃತೀಯಲಿಂಗಿ ಸಮುದಾಯ ಜನರು ಸಾಮಾಜದಲ್ಲಿ ಗುರುತಿಸಿಕೊಂಡು ಸ್ವಂತ ಉದ್ಯೋಗವನ್ನು ಪಡೆದುಕೊಳ್ಳಲು ಇದು ದೈತ್ಯ ಜಿಗಿತವಾಗಿದೆ ಎಂದು ಹೇಳಲಾಗುತ್ತಿದೆ.