

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ಕಂಡಕ್ಟರ್ ಮೇಲೆ ಮರಾಠಿ ಪುಂಡರ ಹಲ್ಲೆ ಪ್ರಕರಣ ದೇಶವ್ಯಾಪಿ ಸದ್ದು ಮಾಡುತ್ತಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಉಭಯ ರಾಜ್ಯಗಳ ನಡುವಿನ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಸ್ಪಷ್ಟನೆ ನೀಡುವವರೆಗೂ ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಎಂಎಸ್ಆರ್ಟಿಸಿ ಪ್ರತಿನಿತ್ಯ ಕರ್ನಾಟಕಕ್ಕೆ 250ಕ್ಕೂ ಅಧಿಕ ಬಸ್ಗಳನ್ನು ಆಪರೇಟ್ ಮಾಡುತ್ತದೆ. ಅದೇ ರೀತಿ ಕೆಎಸ್ಆರ್ಟಿಸಿ ಕರ್ನಾಟಕದಿಂದ ಮಹಾರಾಷ್ಟ್ರಗೆ ಪ್ರತಿನಿತ್ಯ 120ಕ್ಕೂ ಅಧಿಕ ಬಸ್ಗಳನ್ನು ಆಪರೇಟ್ ಮಾಡುತ್ತದೆ. ಇದೀಗ ಉಭಯ ರಾಜ್ಯಗಳ ನಡುವಿನ ಸಂದಿಗ್ದ ಪರಿಸ್ಥಿತಿಯಿಂದಾಗಿ ವಿಮಾನ ಪ್ರಯಾಣ ಬೆಲೆ ದುಬಾರಿಯಾಗಿದ್ದು, ಉಭಯ ರಾಜ್ಯಗಳ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಖಾಸಗಿ ವೆಬ್ಸೈಟ್ ಹಾಗೂ ಆನ್ಲೈನ್ ಪೇಮೆಂಟ್ ಆ್ಯಪ್ಗಳಲ್ಲಿ ಬಿತ್ತರವಾಗಿರುವ ಮಾಹಿತಿ ಪ್ರಕಾರ ಮುಂಬೈನಿಂದ ಬೆಂಗಳೂರಿಗೆ ಪ್ರಸ್ತುತ ಇರುವ ದರಕ್ಕಿಂತ ಮೂರು ಪಟ್ಟು ಹೆಚ್ಚಳವಾಗಿದ್ದು, ಏಕಮುಖ ಪ್ರಯಾಣಕ್ಕೆ 10,000 - 12,000 ರೂ. ಚಾರ್ಜ್ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ದರ ಇಳಿಕೆಯಾಗಲಿದೆ ಎಂದು ಹೇಳಲಾಗಿದೆಯಾದರೂ ಒಂದು ವೇಳೆ ಉಭಯ ರಾಜ್ಯಗಳ ನಡುವಿನ ವಿವಾದ ತಣ್ಣಗಾಗದಿದ್ದಲ್ಲಿ ವಿಮಾನ ದರವು ಯಥಾಸ್ಥಿತಿ ಇರಬಹುದು ಎಂದು ಅಂದಾಜಿಸಲಾಗಿದೆ. ಅಂತಿಮವಾಗಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಬೆಳಗಾವಿಯಲ್ಲಿ ಮರಾಠಿಗರ ದೌರ್ಜನ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಚಿತ್ರದುರ್ಗದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಐಮಂಗಲ ಟೋಲ್ ಬಳಿ ಮಹಾರಾಷ್ಟ್ರ ಬಸ್ ತಡೆದು ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಮೂಲದ ಬಸ್ ಮತ್ತು ಚಾಲಕನ ಮೇಲೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಇದೇ ಘಟನೆಯಿಂದ ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ತನ್ನ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದೆ.