Baba Siddique| ಹತ್ಯೆಗೂ ಮುನ್ನ ಎನ್‌ಸಿಪಿ ನಾಯಕ ಮಾಡಿದ ಪೋಸ್ಟ್​; ಕೊನೆಯದಾಗಿ ಹಂಚಿಕೊಂಡ ವಿಚಾರ ಏನು?

Untitled-design-7-2
Published on

ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಬಾಬಾ ಸಿದ್ದಿಕಿ(Baba Siddique) ಅವರನ್ನು ಶನಿವಾರ(ಅಕ್ಟೋಬರ್​​​ 12) ಸಂಜೆ ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರ ಹಂತಕರ ಹುಡುಕಾಟದಲ್ಲಿದ್ದಾರೆ. ಬಾಬಾ ಸಿದ್ದಿಕಿ ಅವರು ಬೆಂಬಲಿಗರೊಂದಿಗೆ ಮಾತುಕತೆ ನಡೆಸಲು ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಯಲ್ಲಿ ಸದಾ ಸಕ್ರಿಯರಾಗಿ ಇರುತ್ತಿದ್ದರು. ಅವರ ಹತ್ಯೆಗೆ ಕೇವಲ ಎರಡು ದಿನಗಳ ಹಿಂದೆ ಅಂದರೆ ಜಾಲತಾಣದಲ್ಲಿ ಕೊನೆಯದಾಗಿ ಪೋಸ್ಟ್​​​ ಮಾಡಿದ್ದಾರೆ. ಅವರ ಪೋಸ್ಟ್​ ಶೇರ್​ ಆದಾಗಿನಿಂದ ಇದುವರೆಗೆ 3563 ಲೈಕ್‌ಗಳನ್ನು ಪಡೆದುಕೊಂಡಿದೆ.

ಅವರು ಮಾಡಿರುವ ಪೋಸ್ಟ್​ನಲ್ಲಿ ಭಾರತೀಯ ಉದ್ಯಮದ ಧೀಮಂತ ವ್ಯಕ್ತಿ ರತನ್​ ಟಾಟಾ ಅವರ ಬಗ್ಗೆ ಬರೆದಿದ್ದಾರೆ. 2024 ಅಕ್ಟೋಬರ್​​ 9ರಂದು ತಮ್ಮ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ದಿ. ಕೈಗಾರಿಕೋದ್ಯಮಿ ರತನ್​ ಟಾಟಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಹಾಗೂ ರತನ್​ ಟಾಟಾ ಅವರ ನಿಧನವನ್ನು ಒಂದು ಯುಗದ ಅಂತ್ಯ ಎಂದು ಬಣ್ಣಿಸಿದ್ದಾರೆ.

ಬಾಬಾ ಸಿದ್ದಿಕಿ(66) ಅವರನ್ನು ಬಾಂದ್ರಾದಲ್ಲಿರುವ ಅವರ ಮಗನ ಕಚೇರಿ ಬಳಿಯ ಖೇರ್ ನಗರದಲ್ಲಿ ಮೂವರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹಂತಕರು ಕನಿಷ್ಠ ಆರು ಗುಂಡುಗಳನ್ನು ಅವರಿಗೆ ಹಾರಿಸಿದ್ದಾರೆ. ಅದರಲ್ಲಿ 4 ಅವರ ಎದೆಗೆ ತಾಕಿದೆ. ದಾಳಿ ನಡೆದ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿರುವುದಾಗಿ ತಿಳಿಸಿದರು.

ಹತ್ಯೆಗೆ ಸಂಬಂಧಿಸಿದಂತೆ ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂಬ ಇಬ್ಬರು ಶಂಕಿತರನ್ನು ಈಗಾಗಲೇ ಬಂಧಿಸಲಾಗಿದ್ದು, ಮೂರನೇ ಶಂಕಿತ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರ ವಿಚಾರಣೆ ಸಮಯದಲ್ಲಿ ಆರೋಪಿಗಳು ತಾವು ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ಗೆ ಸೇರಿದವರು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಆದರೆ ಈ ವಿಚಾರವನ್ನು ಪೊಲೀಸರಾಗಲಿ ಅಥವಾ ಲಾರೆನ್ಸ್ ಬಿಷ್ಣೋಯ್ ತಂಡವು ಇನ್ನು ದೃಢಪಡಿಸಿಲ್ಲ , ಹ ತ್ಯೆ ಹಿಂದೆ ತಾವೇ ಇರುವುದಾಗಿ ಒಪ್ಪಿಕೊಂಡಿಲ್ಲ. ಪ್ರಸ್ತುತ ಗುಜರಾತ್‌ ಜೈಲಿನಲ್ಲಿರುವ ಬಿಷ್ಣೋಯ್ ಅವರು ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಮುಖ ಕೊಲೆಗಳು ಮತ್ತು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎರಡು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಒಂದು ಬಿಷ್ಣೋಯ್ ಗ್ಯಾಂಗ್‌ನ ಸಂಭಾವ್ಯ ಒಳಗೊಳ್ಳುವಿಕೆಯ ಮೇಲೆ ಕೇಂದ್ರೀಕರಿಸುತ್ತದೆ. ಏಕೆಂದರೆ ಸಿದ್ದಿಕಿ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಆತ್ಮೀಯರಾಗಿದ್ದಾರೆ. ಈ ಹಿಂದೆ ಬಿಷ್ಣೋಯ್​​ ಗ್ಯಾಂಗ್‌ನಿಂದ ಕೊಲೆ ಬೆದರಿಕೆಗಳನ್ನು ಪಡೆದಿದ್ದರು. ಎರಡನೇ ಆಯಾಮವು ಕೊಳೆಗೇರಿ ಪುನರ್ವಸತಿ ಪ್ರಕರಣಕ್ಕೆ ಸಂಬಂಧಿಸಿದೆ. ದಾಳಿಯ 15 ದಿನಗಳ ಮೊದಲು ಸಿದ್ದಿಕಿ ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದವು ಎಂದು ಮೂಲಗಳು ಸೂಚಿಸುತ್ತವೆ. ಇದರಿಂದಾಗಿ ಅವರನ್ನು ವೈ ವರ್ಗದ ಭದ್ರತೆಯ ಅಡಿಯಲ್ಲಿ ಇರಿಸಲಾಗಿತ್ತು.

ಬಾಬಾ ಸಿದ್ದಿಕಿ ಯಾರು?:

ಬಾಬಾ ಸಿದ್ದಿಕಿ ಅವರು 1999, 2004 ಮತ್ತು 2009ರಲ್ಲಿ ಸತತ ಮೂರು ಅವಧಿಗೆ ಶಾಸಕರಾಗಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು, ಕಾರ್ಮಿಕ ಮತ್ತು ಎಫ್‌ಡಿಎ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಸೇರಿದರು. 'ಬಾಂದ್ರಾ ಬಾಯ್' ಎಂದೇ ಖ್ಯಾತರಾಗಿರುವ ಸಿದ್ದಿಕಿ ಬಾಲಿವುಡ್ ನಟರಾದ ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ ಅವರ ಆತ್ಮೀಯ ಸ್ನೇಹಿತರೂ ಆಗಿದ್ದರು. ಸಲ್ಮಾನ್ ಖಾನ್ ಮತ್ತು ಶಾರೂಖ್​​ ಖಾನ್​ ನಡುವಿನ 5 ವರ್ಷಗಳ ಮನಸ್ತಾಪವನ್ನು ಕೊನೆಗೊಳಿಸಿದರು ಎಂದು ಹೇಳಲಾಗುತ್ತದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net