

ಸಾಗರ: ವಿದ್ಯಾರ್ಥಿ ಜೀವನ ಬಹಳ ಮುಖ್ಯವಾದುದು. ಈ ಅವಧಿಯಲ್ಲಿ ಆದಷ್ಟು ಏಕಮುಖಿ ಚಿಂತನೆಯಿಂದ ಹೊರಬಂದು ಬಹುಮುಖಿಯಾಗಿ ಆಲೋಚಿಸುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕುಡೋ ಕ್ರೀಡೆ ವಿಶ್ವ ಚಾಂಪಿಯನ್ ಜಪಾನಿನ ಸನ್‌ಸೈ ನೊರಿಹಿದೆ ತೆರಗುಚ್ಚಿ ಹೇಳಿದರು.
ತಾಲೂಕಿನ ಎಂ.ಎಲ್.ಹಳ್ಳಿಯಲ್ಲಿನ ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಆಲ್ ಇಂಡಿಯಾ ಕುಡೋ ತರಬೇತಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳು ಮನುಷ್ಯನ ಎಲ್ಲ ಅಂಗಾಂಗಗಳ ಚಲನೆಗೆ ಕಾರಣವಾಗುತ್ತವೆ. ಆರೋಗ್ಯವಂತ ಜೀವನ, ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಕ್ರೀಡೆ ಸಹಕಾರಿ. ಆರೋಗ್ಯದಿಂದ ಮಾತ್ರ ಜೀವನದ ವಿವಿಧ ರಂಗಗಳಲ್ಲಿ ಸಾಧನೆ ಸಾಧ್ಯ. ಇಂದು ಅಂತಾರಾಷ್ಟ್ರೀಯ ಕುಡೋ ಚಾಂಪಿಯನ್‌ನಲ್ಲಿ ಬಂಗಾರದ ಪದಕ ಪಡೆಯಲು ಶ್ರದ್ಧೆ ಮತ್ತು ನಿರಂತರ ಶ್ರಮ ಕಾರಣ ಎಂದರು.
ಗುಜರಾತ್‌ನ ಕುಡೋ ಅಸೋಸಿಯೇಷನ್ ನಿರ್ದೇಶಕ ಪ್ರಿಯಾಂಕ ರಾಣಾ ಮಾತನಾಡಿ, ಕುಡೋ ಕ್ರೀಡೆಯಲ್ಲಿ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಸಂಸ್ಥೆಯ ಶಕ್ತಿಯಾಗಿ ಹೊಸ ಪ್ರಯತ್ನಗಳನ್ನು ಮಾಡುತ್ತಿರುವ ಮುಖ್ಯಸ್ಥಾರಾದ ದೇವರಾಜ್ ಹಾಗೂ ಎಲ್ಲಾ ಶಿಕ್ಷಕರಿಗೆ ನಾನು ಆಭಾರಿಯಾಗಿದ್ದೇನೆ. ಶಿಕ್ಷಣ ಸಂಸ್ಥೆಗಳು ಈ ರೀತಿಯ ಪ್ರಯತ್ನಕ್ಕೆ ಮುಂದಾಗಬೇಕು. ಆಗ ವಿದ್ಯೆ ಜತೆಗೆ ಬದುಕಿನ ಶಿಕ್ಷಣ ನೀಡಬಹುದು ಎಂದು ತಿಳಿಸಿದರು.
ಶ್ರೀ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ದೇವರಾಜ್ ಮಾತನಾಡಿ, ಕ್ರೀಡೆಗಳು ದೇಶ-ವಿದೇಶಗಳ ಜನರನ್ನು ಬೆಸೆಯುವ ಕೆಲಸ ಮಾಡುತ್ತವೆ. ಜಪಾನಿನ ಕ್ರೀಡಾ ಸಾಧಕ ನೊರಿಹಿದೆ ತೆರಗುಚ್ಚಿ ಅವರು ಸಾಗರಕ್ಕೆ ಆಗಮಿಸಿ ನಮ್ಮ ವಿದ್ಯಾರ್ಥಿಗಳಲ್ಲಿ ಕುಡೋ ಆಸಕ್ತಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿರುವುದು ಶ್ಲಾಘನೀಯ ಎಂದರು
ರಾಜ್ಯ ಕುಡೋ ಅಸೋಸಿಯೇಷನ್ ಅಧ್ಯಕ್ಷ ರೆನ್ಸಿ ಸಬ್ಬೀರ್ ಅಹ್ಮದ್ ಮಾತನಾಡಿ, ವಿದ್ಯಾರ್ಥಿ ಜೀವನದ ಯಶಸ್ಸಿಗೆ ಉತ್ತಮ ಆರೋಗ್ಯ ಮುಖ್ಯ. ಆರೋಗ್ಯವಂತ ಮನುಷ್ಯನಿಂದ ಮಾತ್ರ ಯಾವುದೇ ಸಾಧನೆ ಮಾಡಲು ಸಾಧ್ಯ. ಆದ್ದರಿಂದ ಕುಡೋ ಕ್ರೀಡೆ ಯುವಜನರಲ್ಲಿ ಸಂಯಮ ರೂಢಿಸುವ ಜತೆಗೆ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ ಎಂದು ಹೇಳಿದರು.
ರಾಮಕೃಷ್ಣ ವಿದ್ಯಾಲಯದ ಮುಖ್ಯಶಿಕ್ಷಕಿ ಸವಿತಾ ದೇವರಾಜ್, ಶಿಕ್ಷಕಿ ಅಪ್ಸರಾ, ಹಿರಿಯ ಶಿಕ್ಷಕರಾದ ಹುಚ್ಚಪ್ಪ ಇತರರಿದ್ದರು.