

ಇಂಫಾಲ್; ಮಣಿಪುರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿರುವ ಸಂಘಟಿತ ಕಾರ್ಯಾಚರಣೆಯಲ್ಲಿ, ಜಂಟಿ ಭದ್ರತಾ ಪಡೆಗಳು ಇಂದು(26) ಕಣಿವೆಯ ಐದು ಜಿಲ್ಲೆಗಳಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಂಘಟಿತ ಕಾರ್ಯಾಚರಣೆಗಳ ಪರಿಣಾಮವಾಗಿ ಹಲವಾರು ಗುಪ್ತ ಸ್ಥಳಗಳಿಂದ 90 ಶಸ್ತ್ರಾಸ್ತ್ರಗಳು ಮತ್ತು 728 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು. ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಮೂರು ಎಕೆ ಸರಣಿಯ ರೈಫಲ್‌ಗಳು, ಒಂದು ಎಂ 16 ರೈಫಲ್, ಒಂದು ಐಎನ್‌ಎಸ್‌ಎಎಸ್ ಲೈಟ್ ಮೆಷಿನ್ ಗನ್, ಐದು ಐಎನ್‌ಎಸ್‌ಎಎಸ್ ರೈಫಲ್‌ಗಳು, ನಾಲ್ಕು ಸ್ವಯಂ-ಲೋಡಿಂಗ್ ರೈಫಲ್‌ಗಳು, 303 ಕ್ಯಾಲಿಬರ್‌ನ ನಾಲ್ಕು ರೈಫಲ್‌ಗಳು ಮತ್ತು ಏಳು ಪಿಸ್ತೂಲ್‌ಗಳನ್ನು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕ (ವಲಯ-II) ಕೆ.ಕಬೀಬ್ ಮಾತನಾಡಿದ್ದು, ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜುಲೈ 26 ರ ಮುಂಜಾನೆ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಯಿತು.
(ಏಜೆನ್ಸೀಸ್)
ಸಂಘರ್ಷ ಪೀಡಿತ ಮಣಿಪುರದಲ್ಲಿ ಫೆಬ್ರವರಿಯಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ. ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗಾಗಿ ಭದ್ರತಾ ಪಡೆಗಳು ಪ್ರಯತ್ನಿಸುತ್ತಿವೆ. ರಾಜ್ಯದ ವಿವಿದೆಡೆ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಈವರೆಗೆ 3,000ಕ್ಕೂ ಹೆಚ್ಚು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಒಂದು ಪ್ರಮುಖ ಸಾಧನೆ ಎಂದು ಬಣ್ಣಿಸಿರುವ ಮಣಿಪುರ ಪೊಲೀಸರು, ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಮತ್ತು ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಮತ್ತು ಅಕ್ರಮ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ಮಾಹಿತಿ ತಿಳಿದು ಬಂದರೆ, ಅದನ್ನು ವರದಿ ಮಾಡುವಂತೆ ಇಲಾಖೆ ನಿವಾಸಿಗಳಲ್ಲಿ ಮನವಿ ಮಾಡಿದೆ.