ಶಾಸಕ ನಿಂಬಣ್ಣವರ ಪುತ್ರನ ಕಾರಿಗೆ ಕಲ್ಲೇಟು

04-kalaghatagi 1-Car
Published on

ಕಲಘಟಗಿ: ಕ್ಷೇತ್ರದ ಶಾಸಕ ಸಿ.ಎಂ. ನಿಂಬಣ್ಣವರ ಅವರ ಪುತ್ರನ ಮಾರುತಿ ಕಾರಿಗೆ ಕೆಲವರು ಕಲ್ಲು ಹೊಡೆದು ಮುಂಭಾಗದ ಗಾಜು ಜಖಂಗೊಳಿಸಿದ ಘಟನೆ ತಾಲೂಕಿನ ಸಂಗೆದೇವರಕೊಪ್ಪದಲ್ಲಿ ನಡೆದಿದೆ.

ಶಾಸಕರ ಪುತ್ರ ಮಡಕಿಹೊನ್ನಿಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಶಶಿಧರ ನಿಂಬಣ್ಣವರ ಹಾಗೂ ನಾಗರಾಜ ಹನುಮಂತ ನಿಂಬಣ್ಣವರ, ರಾಜೇಂದ್ರ ಸುರೇಶ ಜಾಯನಗೌಡರ ಎಂಬವರು ಸಂಗೆದೇವರಕೊಪ್ಪ ಗ್ರಾಮದಲ್ಲಿಯ ಹೊಲಕ್ಕೆ ತೆರಳಿದ್ದರು. ರಾತ್ರಿ 10.30 ಗಂಟೆ ಸುಮಾರಿಗೆ ಅವರು ಕಲಘಟಗಿಗೆ ಹಿಂದಿರುಗುತ್ತಿದ್ದಾಗ ಮಾರ್ಗಮಧ್ಯೆ ಕೆಲವರು ಕಾರು ತಡೆದು ಜೀವ ಬೆದರಿಕೆ ಹಾಕಿ, ಕಲ್ಲಿನಿಂದ ಗಾಜಿಗೆ ಹೊಡೆದು ಹಾನಿ ಉಂಟುಮಾಡಿದ್ದಾರೆ.

ಶಾಸಕರ ಸಂಬಂಧಿಗಳೇ ಆಗಿರುವ ಶಂಕ್ರಪ್ಪ ಹನುಮಂತಪ್ಪ ನಿಂಬಣ್ಣವರ, ಮಹಾಂತೇಶ ಹನುಮಂತಪ್ಪ ನಿಂಬಣ್ಣವರ ಹಾಗೂ ಸಂಗಮೇಶ ಹನುಮಂತಪ್ಪ ನಿಂಬಣ್ಣವರ ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ ಎಂದು ನಾಗರಾಜ ನಿಂಬಣ್ಣವರ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆದಿದೆ ಎಂದು ಸಿಪಿಐ ವಿಜಯ ಬಿರಾದಾರ ತಿಳಿಸಿದ್ದಾರೆ.

ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿನ ದ್ವೇಷವೇ ಹಲ್ಲೆಗೆ ಕಾರಣ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net