

ಜೈಪುರ: ರಾಜಸ್ಥಾನ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರಾದ 18 ಶಾಸಕರಿಗೆ ಸ್ಪೀಕರ್ ಸಿ.ಪಿ.ಜೋಶಿ ಅವರು ಅನರ್ಹತೆಯ ನೋಟಿಸ್ ಕಳಿಸಿದ್ದಾರೆ.
ಸ್ಪೀಕರ್ ಕಳಿಸಿದ ಅನರ್ಹತೆಯ ನೋಟಿಸ್ ಪ್ರಶ್ನಿಸಿ ಸಚಿನ್ ಪೈಲಟ್ ಹಾಗೂ ಅವರ ಬಣ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿದೆ.
ಕೇಂದ್ರ ಸರ್ಕಾರದ ಮಾಜಿ ಅಟರ್ನಿ ಜನರಲ್ ಮುಕುಲ್ ರೋಹಟಗಿ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಸಚಿನ್ ಪೈಲಟ್ ಮತ್ತವರ ಬಣದ ಪರ ವಕಾಲತ್ತು ವಹಿಸಲಿದ್ದಾರೆ.
ಇತ್ತ ಕಾಂಗ್ರೆಸ್ ಹಿರಿಯ ನಾಯಕ, ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ರಾಜಸ್ಥಾನ ಅಸೆಂಬ್ಲಿ ಸ್ಪೀಕರ್ ಅವರ ಪರ ಹೈಕೋರ್ಟ್ನಲ್ಲಿ ವಾದ ಮಂಡಿಸಲಿದ್ದಾರೆ. ಅಂದರೆ ಹೈಕೋರ್ಟ್ನಲ್ಲಿ ಮುಕುಲ್ ರೋಹಟಗಿ ಮತ್ತು ಅಭಿಷೇಕ್ ಮನು ಸಿಂಘ್ವಿ ನಡುವೆ ನೇರ ಜಟಾಪಟಿ ನಡೆಯಲಿದೆ.
ತಮಗೆ ಕಳಿಸಿರುವ ಅನರ್ಹತೆ ನೋಟಿಸ್ ಪ್ರಶ್ನಿಸಿ ಸಚಿನ್ ಪೈಲಟ್ ಬಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ ನಡೆದಿದೆ. ಈ ವೇಳೆ ತಾವು ಸಲ್ಲಿಸಿದ ಅರ್ಜಿಯನ್ನು ತಿದ್ದುಪಡಿ ಮಾಡಲು ಸಮಯಾವಕಾಶ ನೀಡಬೇಕು ಎಂದು ಸಚಿನ್ ಪೈಲಟ್ ಬಣ ಮನವಿ ಮಾಡಿದೆ. ಅದನ್ನು ಹಿರಿಯ ವಕೀಲ ಸುರೇಶ್ ಸಾಳ್ವೆ ಇಂದು ಕೋರ್ಟ್ಗೆ ತಿಳಿಸಿದ್ದರು. ಅದಕ್ಕೆ ಹೈಕೋರ್ಟ್ ಕೂಡ ಅಸ್ತು ಎಂದಿದ್ದು, ತಿದ್ದುಪಡಿಗೆ ಸಮಯ ನೀಡಿದೆ. ಇದನ್ನೂ ಓದಿ: ದ್ಯುತಿಗಿಲ್ಲ ಪ್ರಾಯೋಜಕರ ಕೊರತೆ, ಕಾರು ಮಾರಾಟಕ್ಕೆ ರೈಲು ಬಿಟ್ಟ ಅಥ್ಲೀಟ್!
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕರೆದಿದ್ದ ಎರಡೂ ಶಾಸಕಾಂಗ ಪಕ್ಷದ ಸಭೆಗೆ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರು ಗೈರಾಗಿದ್ದರು. ಅದರ ಬೆನ್ನಲ್ಲೇ ಮಂಗಳವಾರ ಸ್ಪೀಕರ್ ಅವರಿಗೆ ಅನರ್ಹತೆಯ ನೋಟಿಸ್ ಕಳಿಸಿದ್ದರು.
ಸಚಿನ್ ಪೈಲಟ್ ಅವರು ಕಾನೂನು ಹೋರಾಟಕ್ಕೆ ಮೊದಲು ಅಭಿಷೇಕ್ ಮನು ಸಿಂಘ್ವಿಯವರನ್ನೇ ಕೇಳಿಕೊಂಡಿದ್ದರು. ಆದರೆ ಅವರು ಅದಾಗಲೇ ಸ್ಪೀಕರ್ ಪರ ವಕಾಲತ್ತಿಗೆ ಒಪ್ಪಿಕೊಂಡಾಗಿತ್ತು. ಇದೀಗ ಮುಕುಲ್ ರೋಹಟಗಿ ಅವರು ಆಖಾಡಕ್ಕೆ ಇಳಿದಿದ್ದಾರೆ. (ಏಜೆನ್ಸೀಸ್)