

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಖೇಶ್ ಅಂಬಾನಿ ಅವರಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಬಂದಿದ್ದು, 20 ಕೋಟಿ ರೂ. ಹಣ ಕೊಡದಿದ್ದರೆ ಪ್ರಾಣ ಉಳಿಯುವುದಿಲ್ಲ ಎಂದು ಕಿಡಿಗೇಡಿಗಳು ಹೇಳಿರುವುದಾಗಿ ನಗರದ ಪೊಲೀಸರು ತಿಳಿಸಿದ್ದಾರೆ.
ಮುಖೇಶ್ ಅಂಬಾನಿ ಕಂಪನಿಯ ಐಡಿಗೆ ಅಪರಿಚಿತ ವ್ಯಕ್ತಿಯೊಬ್ಬರು ಕಳುಹಿಸಿರುವ ಇ-ಮೇಲ್‌ನಲ್ಲಿ 20 ಕೋಟಿ ರೂಪಾಯಿ ಹಣ ನೀಡಬೇಕು ಇಲ್ಲವಾದಲ್ಲಿ ನಿಮ್ಮನ್ನು ಹತ್ಯೆ ಮಾಡುವುದಾಗಿ ತಿಳಿಸಿದ್ದಾರೆ.
"ನೀವು ನಮಗೆ 20 ಕೋಟಿ ರೂಪಾಯಿ ನೀಡದಿದ್ದರೆ, ನಾವು ನಿಮ್ಮನ್ನು ಕೊಲ್ಲುತ್ತೇವೆ, ನಾವು ಭಾರತದಲ್ಲಿ ಅತ್ಯುತ್ತಮ ಶೂಟರ್‌ಗಳನ್ನು ಹೊಂದಿದ್ದೇವೆ" ಎಂದು ಇ-ಮೇಲ್ ತಿಳಿಸಿದೆ. ಮುಕೇಶ್ ಅಂಬಾನಿ ಅವರ ಭದ್ರತಾ ಉಸ್ತುವಾರಿ ದೂರಿನ ಆಧಾರದ ಮೇಲೆ ಮುಂಬೈನ ಗಾಮ್‌ದೇವಿ ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 387 ಮತ್ತು 506 (2) ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಶೀಘ್ರ ತನಿಖೆ ಆರಂಭಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).