

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಜತೆಗೆ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣಾವಾನಂದ ಸ್ವಾಮೀಜಿ ಆಗ್ರಹಿಸಿದರು.
ನಿಗಮದಲ್ಲಿ 187 ಕೋಟಿ ರೂ. ಅವ್ಯವಹಾರ ಆಗಿದ್ದು ಹೈದರಾಬಾದ್‌ನ ವಿವಿಧ ಕಂಪನಿಗಳಿಗೆ ವರ್ಗಾವಣೆ ಆಗಿದೆ. ರಾಜ್ಯ ಸರ್ಕಾರ ಪ್ರಕರಣವನ್ನು ಎಸ್‌ಐಟಿಗೆ ವಹಿಸಿದ್ದು ಅದರಿಂದ ಸತ್ಯಾಸತ್ಯತೆ ಹೊರಬರುವುದು ಕಷ್ಟ. ಹೈದರಾಬಾದ್‌ನ ವಿವಿಧ ಕಂಪನಿಗಳ ಮಾಲೀಕರು, ಸಂಬಂಧಪಟ್ಟವರನ್ನು ವಿಚಾರಣೆಗೆ ಒಳಪಡಿಸಬೇಕಿರುವ ಕಾರಣ ಸಿಬಿಐಗೆ ವಹಿಸುವುದೇ ಸೂಕ್ತ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಚಿವರ ಮೌಖಿಕ ಆದೇಶ ಎಂದರೆ ಅವರೂ ಪಾಲ್ಗೊಂಡಂತೆ ಅರ್ಥ. ಯಾವುದೇ ಪಕ್ಷದ ಪರವಾಗಿ ಮಾತನಾಡುವುದಿಲ್ಲ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್ ನಾಯಕರು ಈಗ ಎಲ್ಲಿಗೆ ಹೋಗಿದ್ದಾರೆ ಎಂದು ಪ್ರಶ್ನಿಸಿದ ಸ್ವಾಮೀಜಿ, ಈ ಪಾಪವನ್ನು ರಾಜ್ಯ ಸರ್ಕಾರ ಎಲ್ಲಿ ಹೋಗಿ ತೊಳೆಯುತ್ತದೆ. ಹಿಂದುಳಿದ ಸಮುದಾಯಕ್ಕೆ ಮಾಡಿರುವ ದೊಡ್ಡ ಅನ್ಯಾಯ ಇದಾಗಿದೆ. ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಪ್ರಕರಣವನ್ನು ಎಸ್‌ಐಟಿಗೆ ವಹಿಸಿದ್ದು, ವಾಲ್ಮೀಕಿ ಸಮುದಾಯಕ್ಕೆ ಸರ್ಕಾರ ಚೊಂಬು ಕೊಟ್ಟಿದೆ ಎಂದು ದೂರಿದರು.
ಮೃತ ಚಂದ್ರಶೇಖರನ್ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಕೊಡಬೇಕು. ಪತ್ನಿ ಅಥವಾ ಮಗನಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಒತ್ತಾಯಿಸಿದರು.
ಲೋಕಸಭೆ ಚುನಾವಣೆ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಮಾಡಬೇಕು. ಈಡಿಗ ಸಮುದಾಯಕ್ಕೆ ಇನ್ನೊಂದು ಸಚಿವ ಸ್ಥಾನ ನೀಡಬೇಕು. ಬಿಜೆಪಿ ಸರ್ಕಾರವಿದ್ದಾಗ ಇಬ್ಬರಿಗೆ ಸಚಿವ ಸ್ಥಾನ, ಮೂವರಿಗೆ ನಿಗಮ ಮಂಡಳಿ ನೀಡಲಾಗಿತ್ತು. ಹಾಗಾಗಿ ಸಿದ್ದರಾಮಯ್ಯ ಸರ್ಕಾರ ಕೂಡ ಮತ್ತೊಬ್ಬ ಈಡಿಗ ನಾಯಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.