ಕಬ್ಬು ಬೆಳೆಗಾರರ ಪರ ರೈತ ಸಂಘ ಪ್ರತಿಭಟನೆ

MBL 27-1
Published on

ಮುದ್ದೇಬಿಹಾಳ: ಸರ್ಕಾರ ನಿಗದಿಪಡಿಸಿದ ಬೆಲೆಯನ್ನು ರೈತರ ಖಾತೆಗೆ ಜಮಾ ಮಾಡಲು ಸಕ್ಕರೆ ಕಾರ್ಖಾನೆಗಳು ಮುಂದಾಗದಿದ್ದರೆ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ರೈತ ಸಂಘದ ಪದಾಧಿಕಾರಿಗಳು ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಕಬ್ಬು ಬೆಳೆಗಾರರೊಂದಿಗೆ ಮಂಗಳವಾರ ಪ್ರತಿಭಟನೆ ನಡೆಸಿದ ಬಳಿಕ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ರೈತರ ಬಹಿರಂಗ ಸಭೆಯನ್ನುದ್ದೇಶಿಸಿ ಸಂಘದ ಜಿಲ್ಲಾಧ್ಯಕ್ಷ ಸಿದ್ಧನಗೌಡ ಬಿರಾದಾರ ಮಾತನಾಡಿ, ವಿಜಯಪುರ ಮೊದಲೇ ಬರಗಾಲದ ಹಣೆಪಟ್ಟಿ ಹೊತ್ತಿದೆ. ಈ ವರ್ಷದಲ್ಲಿ ಅತಿವೃಷ್ಟಿ, ಪ್ರವಾಹದಿಂದ ರೈತರು ಮತ್ತಷ್ಟು ಹೈರಾಣಾಗಿದ್ದಾರೆ. ಮುದ್ದೇಬಿಹಾಳ ತಾಲೂಕಿನ ಬಾಲಾಜಿ ಸಕ್ಕರೆ ಕಾರ್ಖಾನೆ ಹಾಗೂ ಬಾಗಲಕೋಟೆ ಜಿಲ್ಲೆಯ ನಾಯನೇಗಲಿಯ ಸದಾಶಿವ ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳಗಾರರಿಗೆ 2500 ರೂ. ಬದಲು 2250 ರೂ. ನೀಡುತ್ತಿದ್ದಾರೆ. ಬಾಕಿ ಉಳಿದ 250 ರೂ. ಎಲ್ಲಿ ಹೋದವು. ರೈತರ ಹಣವನ್ನು ಅವರಿಗೆ ಕೊಡಲು ಏಕೆ ಮೀನಮೇಷ ಮಾಡುತ್ತಿದ್ದೀರಿ. ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ನೀಡದೆ ಕಾರ್ಖಾನೆಯವರು ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಅರವಿಂದ ಕೊಪ್ಪ ಮಾತನಾಡಿ, ಕಬ್ಬು ಬೆಳಗಾರರ ಹಿತಕ್ಕೆ ಇರುವ ಕಬ್ಬು ಬೆಳೆ ಬೆಲೆ ನಿಗದಿ ಮಂಡಳಿ ಕಬ್ಬು ಬೆಳೆಗಾರರ ಹಿತ ಕಾಯುವಲ್ಲಿ ವಿಲವಾಗಿದೆ. ಉತ್ತರ ಕರ್ನಾಟಕ ಭಾಗದ ರೈತರ ವಿಷಯದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಕೂಡಲೇ ನಿಗದಿ ಮಾಡಿದ ಬೆಂಬಲೆ ಬೆಲೆೆಯನ್ನು ನೀಡಬೇಕು. ಇಲ್ಲದಿದ್ದರೆ ನ.2 ರ ನಂತರ ತಹಸೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿ ತಹಸೀಲ್ದಾರ್ ಜಿ.ಎಸ್.ಮಳಗಿ ಅವರಿಗೆ ಮನವಿ ಸಲ್ಲಿಸಿದರು.

ಅಯ್ಯಪ್ಪ ಬಿದರಕುಂದಿ, ವೈ.ಎಲ್.ಬಿರಾದಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net