ಮುಡಾ ಹಗರಣಕ್ಕೆ ನಾಂದಿ ಹಾಡಿದ್ದು ಬಿಜೆಪಿ..!

muda
Published on

ಮೈಸೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಸಾಕಷ್ಟು ಹಗರಣಗಳು ನಡೆದಿತ್ತು. ಆ ಸಂದರ್ಭದಲ್ಲಿಯೇ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದರೆ ಪ್ರಸ್ತುತ ಸಾವಿರಾರು ಕೊಟಿ ರೂ.ಮೊತ್ತದ ಹಗರಣ ನಡೆಯುತ್ತಿರಲಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಡಾ ಆಯುಕ್ತರಾಗಿದ್ದ ಡಿ.ಬಿ. ನಟೇಶ್ ಅವಧಿಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದಿದ್ದು, ಈ ಕುರಿತು ತನಿಖೆ ನಡೆಸುವಂತೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರೂ ಅವರು ತನಿಖೆ ನಡೆಸುವ ಗೋಜಿಗೆ ಹೋಗಲಿಲ್ಲ. ಮುಡಾದಲ್ಲಿ ಹಗರಣ ಹೆಚ್ಚಾಗಲು ಬಿಜೆಪಿ ಸರ್ಕಾರದ ನಿರ್ಲಕ್ಷೃವೇ ಕಾರಣ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಮುಖಂಡರಿಗೆ ನೈತಿಕತೆ ಎಲ್ಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಡಿ.ಬಿ. ನಟೇಶ್ ಆಯುಕ್ತರಾಗಿದ್ದ ಸಂದರ್ಭ ಬಿಜೆಪಿ ನಾಯಕರೊಬ್ಬರೊಂದಿಗೆ ಹೆಲಿಕಾಪ್ಟರ್‌ನಲ್ಲೇ ಸಂಚರಿಸುತ್ತಿದ್ದರು. ಅಂತಹ ಭ್ರಷ್ಟ ಅಧಿಕಾರಿಯನ್ನು ರಕ್ಷಿಸುವ ಕಾರ್ಯವನ್ನು ಬಿಜೆಪಿ ಮುಖಂಡರು ಮಾಡಿದರು. ಆದರೆ, ಇದೀಗ ರಾಜಕೀಯ ಕಾರಣಕೋಸ್ಕರ ಅಹಿಂದ ಮುಖಂಡ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಿದರೆ ನಾವು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ಈ ಕುರಿತು ಚರ್ಚಿಸಲು ಜು.13 ರಂದು ಬೆಳಗ್ಗೆ 11.30ಕ್ಕೆ ಗುರು ರೆಸಿಡೆನ್ಸಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಯೋಗೇಶ್, ರವಿನಂದನ್, ಮೊಗಣ್ಣಚಾರ್, ರಾಜೇಶ್, ಲೋಕೇಶ್ ಮಾದಾಪುರ, ಎಚ್.ಎಸ್. ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net