ಮುಡಾ ಹಗರಣ: ಹೈಕೋರ್ಟ್​ ಆದೇಶದ ಬಳಿಕ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಇಲ್ಲಿದೆ

siddu
Published on

ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಸೋಮವಾರ ನಡೆದಿದೆ. ಸುದೀರ್ಘ ಒಂದೂವರೆ ಗಂಟೆ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆಯನ್ನು ಆ.29ರ ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

ಅರ್ಜಿ ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ಬಳಿಕ ಮಾತನಾಡಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ದೂರುದಾರರು ಹಾಗೂ ಸಿಎಂ ಪರ ವಕೀಲರು ವಾದ ಮಂಡಿಸಿದ್ದಾರೆ.

ಇದರೊಂದಿಗೆ ಮುಂದಿನ 10 ದಿನ ಮುಖ್ಯಮಂತ್ರಿಗಳ ವಿರುದ್ಧ ಯಾವುದೇ ತನಿಖೆ, ಯಾವುದೇ ವಿಚಾರಣೆ ನಡೆಸುವಂತಿಲ್ಲ. ಯಾವುದೇ ಎಫ್ಐಆರ್ ದಾಖಲಾದ್ರೂ ಆಗಸ್ಟ್ 29ರವರೆಗೂ ಸಿದ್ದರಾಮಯ್ಯ ಅವರನ್ನು ಟಚ್ ಮಾಡಂಗಿಲ್ಲ. ಹೀಗಾಗಿಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿರುವ ಸಿದ್ದರಾಮಯ್ಯ, ಕೋರ್ಟ್​ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ್ದ, ಅಂತಿಮ ಗೆಲುವು ಸತ್ಯದ್ದೇ ಆಗಿರಲಿದೆ ಎಂಬುದು ನನ್ನ ದೃಢ ನಂಬಿಕೆಯಾಗಿದೆ. ಸತ್ಯಮೇವಜಯತೆ ಎಂದಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆಯಿಟ್ಟಿರುವ, ಈ ನೆಲದ ಕಾನೂನನ್ನು ಗೌರವಿಸುವ ಓರ್ವ ಪ್ರಜೆಯಾಗಿ ಸುಳ್ಳು ಪ್ರಕರಣದಲ್ಲಿ ನನ್ನ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ರಾಜಕೀಯ ಪ್ರೇರಿತ ನಿರ್ಣಯದ ವಿರುದ್ಧ ಘನ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದೇನೆ.

ಉಚ್ಚ ನ್ಯಾಯಾಲಯವು ಈ ವಿಚಾರವನ್ನು ಆಲಿಸಿ, ಮುಂದಿನ ವಿಚಾರಣೆಯ ವರೆಗೆ ವಿಶೇಷ ನ್ಯಾಯಾಲಯಗಳು ವಿಚಾರಣೆ ಮುಂದೂಡಬೇಕು, ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ನೀಡಿದೆ. ನ್ಯಾಯಾಲಯದ ಈ ಆದೇಶವನ್ನು ವಿನಮ್ರವಾಗಿ ಸ್ವೀಕರಿಸುತ್ತ ನನ್ನ ಧನ್ಯವಾದ ಸಲ್ಲಿಸುತ್ತೇನೆ. ಅಂತಿಮ ಗೆಲುವು ಸತ್ಯದ್ದೇ ಆಗಿರಲಿದೆ ಎಂಬುದು ನನ್ನ ದೃಢ ನಂಬಿಕೆಯಾಗಿದೆ. ಸತ್ಯಮೇವಜಯತೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net