ಮುಡಾ ಅಕ್ರಮ ಹೈಕೋರ್ಟ್​ಗಿಂದು ವರದಿ?; ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಎಸ್ಪಿ ಉದೇಶ್​ ತಂಡ

3-67967f061079b
Published on

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮುಡಾ ಹಗರಣದ ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ಸೋಮವಾರ (ಜ.27) ಹೈಕೋರ್ಟ್​ ಧಾರವಾಡ ಪೀಠಕ್ಕೆ ಸಲ್ಲಿಕೆಯಾಗಲಿದೆ.

ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಹಾಗೂ ಇನ್ನಿತರರ ವಿರುದ್ಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಿದ್ದಾರೆ. ಲೋಕಾಯುಕ್ತ ಎಸ್ಪಿ ಉದೇಶ್​ ನೇತೃತ್ವದ ತಂಡ ಶುಕ್ರವಾರ ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್​ಗೆ ತನಿಖಾ ವರದಿ ಸಲ್ಲಿಸಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಪೀಠವು ಜ.27 ರೊಳಗೆ ವರದಿ ಸಲ್ಲಿಸಲು ಗಡುವು ನೀಡಿತ್ತು. ಇದೀಗ ನ್ಯಾಯಾಲಯಕ್ಕೆ ಸಲ್ಲಿಸುತ್ತಿರುವುದು ಈ ವರದಿ ಅಂತಿಮವಲ್ಲ. ತನಿಖೆ ಮತ್ತಷ್ಟು ದಿನ ಮುಂದುವರಿಯಲಿದ್ದು, ಅದು ಪೂರ್ಣಗೊಂಡ ನಂತರ ಅಂತಿಮ ವರದಿ ಸಲ್ಲಿಕೆಯಾಗಲಿದೆ. ಇದಕ್ಕಾಗಿ ನ್ಯಾಯಾಲಯದಲ್ಲಿ ಅನುಮತಿ ಕೋರುವ ಸಾಧ್ಯತೆ ಇದೆ.

ಇಂದು ಮಹತ್ವದ ದಿನ: ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಲಾದ ಅರ್ಜಿ ವಿಚಾರಣೆ ಸೋಮವಾರ ವಿಚಾರಣೆಗೆ ಬರಲಿದೆ. ಹೀಗಾಗಿ ಸಿದ್ದರಾಮಯ್ಯಗೆ ಸೋಮವಾರ ಮಹತ್ವದ ದಿನವಾಗಿದೆ. ಹಗರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು.

3 ಸಾವಿರಕ್ಕೂ ಹೆಚ್ಚಿನ ಪುಟ!: ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹೆಸರಿಗೆ ಮಂಜೂರಾಗಿದ್ದ 14 ನಿವೇಶನಗಳ ಕುರಿತಂತೆ ವಿವಿಧ ಆಯಾಮಗಳಲ್ಲಿ ಲೋಕಾಯುಕ್ತ ತನಿಖೆ ನಡೆಸಿದ್ದು, ಮುಖ್ಯಮಂತ್ರಿ ಸೇರಿ ಹಲವರನ್ನು ವಿಚಾರಣೆ ನಡೆಸಲಾಗಿದೆ. ಎಸ್​ಪಿ ಉದೇಶ್​ ಮೂರು ಸಾವಿರಕ್ಕೂ ಹೆಚ್ಚು ಪುಟಗಳ ವರದಿ ಸಿದ್ಧಪಡಿಸಿದ್ದು, ಅದನ್ನು ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರ ರಾವ್​ ಅವರಿಗೆ ಸಲ್ಲಿಸಲಿದ್ದಾರೆ. ಸುಬ್ರಹ್ಮಣ್ಯೇಶ್ವರ್​ ಅವರು ಹಲವು ಸಭೆಗಳನ್ನು ನಡೆಸಿ ವರದಿ ಸಿದ್ಧಪಡಿಸಿದ್ದು, ಸಿಎಂ ಮತ್ತು ಅವರ ಪತ್ನಿಗೆ ಕ್ಲೀನ್​ಚಿಟ್​ ನೀಡಲಾಗಿದೆ ಎಂದು ತಿಳಿದುಬಂದಿದೆ.

ವರದಿಯಲ್ಲಿ ಏನೇನಿದೆ?

ವರದಿಯಲ್ಲಿ 25ಕ್ಕೂ ಹೆಚ್ಚು ಜನ-ರ ಹೇಳಿಕೆಗಳಿವೆ, 17ಎ ಅಡಿಯಲ್ಲಿ ಸಂಗ್ರಹಿಸಿರುವ ವರದಿ, ಆಡಿಯೋ, ವಿಡಿಯೋ, ಎಫ್​ಎಸ್​ಎಲ್​ ವರದಿಗಳು, ದಾಖಲೆಗಳ ಸಂಗ್ರಹದ ಹಾ-ರ್ಡ್​ ಡಿ-ಸ್ಕ್​, ಸಿಡಿ, ಪೆ-ನ್​ ಡೆವ್​ಗಳು, ಮೈಸೂರು ವಿಜಯನಗರದ 14 ಸೈಟ್​ಗಳು, ಕೆಸರೆ ಸರ್ವೇ ನಂ.464ರ 3.16 ಎಕರೆ ಭೂಮಿಯ ಮಾಹಿತಿ ಒಳಗೊಂಡಿದೆ. ಅ-ಲ್ಲ-ದೆ ಆರ್​ಟಿಸಿ, ಭೂ ಪರಿವರ್ತನೆ, ಮೂಲ ಮಾಲೀಕರ ಬಳಿಯ ದಾಖಲೆ ಗಳು, ಕೈ ಬದಲಾವಣೆಯಾದ ದಾಖಲೆಗಳ ಸಂಗ್ರಹ, ಮುಡಾದಲ್ಲಿ ಯಾವ ಯಾವ ಹಂತದಲ್ಲಿ ಪತ್ರ ವ್ಯವಹಾರ ನಡೆದಿದೆ, ಯಾವ ಅಧಿಕಾರಿಗಳು ಸೈಟ್​ ಹಂಚಿಕೆಗೆ ಸಹಿ ಹಾಕಿದ್ದರು ಎಂಬುದರ ವಿವರಗಳೂ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net