

ಬೆಂಗಳೂರು: ವಿಶ್ವ ಪ್ರಸಿದ್ಧ ಎಂಟಿಆರ್ ಕಂಪನಿಯ ಮುಖ್ಯ ಘಟಕದ 30 ಜನ ಸಿಬ್ಬಂದಿಗೆ ಕರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಇಡೀ ಘಟಕವನ್ನು ಸೀಲ್‌ಡೌನ್ ಮಾಡಲಾಗಿದೆ.
ಸಿದ್ಧ ಆಹಾರ ಮತ್ತು ಮಸಾಲಾ ಪದಾರ್ಥಗಳ ತಯಾರಿಕಾ ಕಂಪೆನಿಯಾದ ಎಂಟಿಆರ್‌ನ ಮುಖ್ಯ ಘಟಕವು ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಇದೆ.
ಇದನ್ನೂ ಓದಿ: ವಧುಗೆ ಕರೊನಾ, ಮದುವೆಗೆ ಹೋದ 7 ಜನರಿಗೂ ಪಾಸಿಟಿವ್!
ಒಂದು ವಾರದ ಹಿಂದೆ ಕಂಪೆನಿಯ ಅಡುಗೆ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿತ್ತು. ಅವರಿಂದಾಗಿಯೇ ಇದೀಗ ಇಲ್ಲಿ ಕೆಲಸ ಮಾಡುವ ಸುಮಾರು 30 ಜನರಿಗೆ ವೈರಸ್ ತಗುಲಿದೆ. ಈ ಹಿನ್ನೆಲೆಯಲ್ಲಿ ಬೊಮ್ಮಸಂದ್ರದ ಘಟಕವನ್ನು ಸೀಲ್‌ಡೌನ್ ಮಾಡಲಾಗಿದೆ.
ಸೋಂಕಿತರ ಸಂಪರ್ಕದಲ್ಲಿದ್ದ ಕಂಪೆನಿಯ ಇನ್ನೂ 40 ಉದ್ಯೋಗಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಇಲ್ಲಿಂದ ತಯಾರಾಗುವ ಪದಾರ್ಥಗಳು ಭಾರತ ಮಾತ್ರವಲ್ಲದೇ ಬೇರೆಬೇರೆ ದೇಶಗಳಿಗೂ ರಫ್ತಾಗುತ್ತಿವೆ. ಸೀಲ್‌ಡೌನ್‌ನಿಂದಾಗಿ ಉತ್ಪಾದನಾ ಕಾರ್ಯ ಸ್ಥಗಿತವಾಗಿದೆ.
ಇದು ಪ್ರಮುಖ ಘಟಕವಾಗಿದ್ದ ಹಿನ್ನೆಲೆಯಲ್ಲಿ ಕಂಪೆನಿಗೆ ನೂರಾರು ಕೋಟಿ ಹಣ ನಷ್ಟವಾಗಲಿದೆ ಎನ್ನಲಾಗಿದೆ.