ಇಂಟೀರಿಯರ್​ ಡಿಸೈನರ್ ಸುಮಾ ಮಹೇಶ್​ ಮುಡಿಗೆ ಮಿಸೆಸ್​ ಇಂಡಿಯಾ ಐ ಆ್ಯಮ್ ಪವರ್​ಫುಲ್ ಕಿರೀಟ..

Suma
Published on

ಬೆಂಗಳೂರು: ದೋಹಾ ಕತಾರ್​ನಲ್ಲಿನ ಒಳಾಂಗಣ ವಿನ್ಯಾಸಕಿ ಮತ್ತು ಮಕ್ಕಳು ಹಾಗೂ ಮಹಿಳೆಯರ ಕೌನ್ಸೆಲರ್ ಕೂಡ ಆಗಿರುವ ಸುಮಾ ಮಹೇಶ್ ಗೌಡ ಮಿಸೆಸ್ ಇಂಡಿಯಾ ಐ ಆ್ಯಮ್ ಪವರ್​​ಫುಲ್-2022ಗೆ ಪಾತ್ರರಾಗಿದ್ದಾರೆ. ಇದೇ ಅ.30ರಂದು ಗೋವಾದಲ್ಲಿ ಈ ಸ್ಪರ್ಧೆ ನಡೆದಿತ್ತು.

ಆ್ಯಸ್ಟರ್ ಫೈನ್ ಆರ್ಟ್ಸ್​ ಎಜುಕೇಷನ್ ಈ ಸ್ಪರ್ಧೆಯನ್ನು ಆಯೋಜಿಸಿದ್ದು, ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಜ್​ಪ್ರೀತ್, ಸಾಮಾಜಿಕ ಕಾರ್ಯಕರ್ತೆ ನಂದಿನಿ ನಾಗರಾಜ್ ಅವರಿಂದ ಉದ್ಘಾಟನೆಗೊಂಡಿತ್ತು.

ಈ ಸೌಂದರ್ಯ ಸ್ಪರ್ಧೆಯಲ್ಲಿ ದೇಶಾದ್ಯಂತದ ಸ್ಪರ್ಧಿಗಳು ಭಾಗವಹಿಸಿದ್ದು, ಟ್ಯಾಲೆಂಟ್, ಥೀಮ್, ಪರ್ಸನಲ್​ ಇಂಟರ್​ವ್ಯೂ, ಕ್ವಶ್ಚನೇರ್, ರ್ಯಾಂಪ್​ ವಾಕ್​ ಮತ್ತು ಅದರ್​ ಟಾಸ್ಕ್ಸ್​ ಎಂಬ ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಸುಮಾ ಮಹೇಶ್​ಗೆ ಜಜ್​ಪ್ರೀತ್ ಕೌರ್ ಮತ್ತು ನಂದಿನಿ ಜೊತೆಯಾಗಿ ಮಿಸೆಸ್​ ಇಂಡಿಯಾ ಐ ಆ್ಯಮ್ ಪವರ್​ಫುಲ್​-2022 ಕಿರೀಟವನ್ನು ತೊಡಿಸಿದರು. ಸುಮಾ ಮಹೇಶ್​ ಮಿಸೆಸ್ ಇಂಡಿಯಾ ಯೂನಿವರ್ಸ್​, ಬೆಸ್ಟ್​ ಪರ್ಸನಾಲಿಟಿ ಹೆಗ್ಗಳಿಕೆಗೂ ಪಾತ್ರರಾಗಿದ್ದು, ಟ್ಯಾಲೆಂಡ್​ ರೌಂಡ್​ನಲ್ಲಿ ಫಸ್ಟ್ ರನ್ನರ್ ಅಪ್​ ಕೂಡ ಆಗಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಇಂಟರ್​​ನ್ಯಾಷನಲ್ ಯೂನಿವರ್ಸ್​ ಸೌಂದರ್ಯ ಸ್ಪರ್ಧೆಯಲ್ಲಿ ಸುಮಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಕತಾರ್​ನಲ್ಲಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ ಸುಮಾ ಮಹೇಶ್, ಮಕ್ಕಳು ಹಾಗೂ ಮಹಿಳೆಯ ಆಪ್ತಸಮಾಲೋಚಕಿಯೂ ಆಗಿದ್ದಾರೆ. ಸಾಮಾಜಿಕ ಸೇವೆಗಾಗಿ ಇವರು ಗಲ್ಫ್​ ಮಾಧ್ಯಮಮ್ ನೀಡುವ ಎಕ್ಸೆಲೆನ್ಸ್ ಅವಾರ್ಡ್​ 'ಶೀ ಕ್ಯೂ'ಗೂ ಪಾತ್ರರಾಗಿದ್ದಾರೆ. ತಮ್ಮೆಲ್ಲ ಸಾಧನೆಯ ಹಿಂದಿರುವ ಶಕ್ತಿಯಾದ ಪತಿ ಮಹೇಶ್ ಗೌಡ ಅವರಿಗೆ ಸುಮಾ ಧನ್ಯವಾದ ಸಲ್ಲಿಸಿ ಈ ಸಂತೋಷವನ್ನು ಹಂಚಿಕೊಂಡಿದ್ದಾರೆ. ಮದುವೆ ಬಳಿಕ ಕತಾರ್​ಗೆ ಸ್ಥಳಾಂತರಗೊಂಡಿರುವ ಸುಮಾ ಕಳೆದ 12 ವರ್ಷಗಳಿಂದ ಅಲ್ಲೇ ನೆಲೆಸಿದ್ದಾರೆ.

ಸಾಹಿಬ್ ಅಲಾಮ್, ಸುಖ್​ವಿಂದರ್, ಕಾವ್ಯಾ ರಾಯ್​ಸ್ಟಾನ್, ಸಿರೆನೊ, ಅನುಷ್ಕಾ, ಸಿಮ್ರಾನ್, ದೀಪಕ್ ಕದಮ್, ದಿವ್ಯಾ ರಾವ್ ಅವರು ಈ ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net