

ಭದ್ರಾವತಿ: ರೈತರ ಭೂಮಿ ಹಾಗೂ ಮೈಸೂರು ಕಾಗದ ಕಾರ್ಖಾನೆಯನ್ನು ಶಾಸಕ ಸಂಗಮೇಶ್ವರ್ ಜತೆಗೂಡಿ ನಾವು ಉಳಿಸಿಕೊಡುತ್ತೇವೆ. ಪಕ್ಷದ ಕಾರ್ಯಕರ್ತರು ಒಗ್ಗೂಡಿ ಶಾಸಕ ಬಿ.ಕೆ.ಸಂಗಮೇಶ್ವರ್ ಕೈಬಲಪಡಿಸಿ ಎಂದು ಸಚಿವ ಮಧುಬಂಗಾರಪ್ಪ ಪಕ್ಷದ ಕಾರ್ಯರ್ಕರಿಗೆ ತಿಳಿಸಿದರು.
ನಗರದ ದೈವಜ್ಞ ಸಭಾಭವನದಲ್ಲಿ ನಗರ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಎಂಪಿಎಂ ಕಾರ್ಖಾನೆ ಅಭಿವೃದ್ದಿಗಾಗಿ ಈ ಹಿಂದೆಯೂ ನಮ್ಮ ಸರ್ಕಾರವೇ ಹಣ ನೀಡಿತ್ತು. ಸಂಗಮೇಶ್ವರ್ ಹಾಗೂ ನಾನು ಸಿಎಂ ಹಾಗೂ ಡಿಸಿಎಂ ಜತೆ ಚರ್ಚೆ ಕೂಡ ನಡೆಸಿದ್ದೇವೆ. ಎಂಪಿಎಂ ಪುನಶ್ಚೇತನಕ್ಕೆ ಬಂಡವಾಳ ತೊಡಗಿಸುವುದು ನಿಶ್ಚಿತ ಎಂದರು.
ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಪಕ್ಷ ಸಂಘಟಿಸುವ ಸಲುವಾಗಿ ಎಲ್ಲ ತಾಲೂಕು ಕೇಂದ್ರಗಳಲ್ಲೂ ಸಭೆ ನಡೆಸಲಾಗುತ್ತಿದೆ. ವಿವಿಧ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕರ್ತರು ಒಟ್ಟಾಗಿ ಚುನಾವಣೆ ನಡೆಸಬೇಕು. ದೊಡ್ಡೇರಿ, ಗಂಗೂರು ಸೇರಿ ಹಲವು ಗ್ರಾಮಗಳಲ್ಲಿ ಉಳುಮೆ ಮಾಡುತ್ತಿರುವ ರೈತರ ಜಮೀನುಗಳನ್ನು ಕಿತ್ತುಕೊಂಡು ಒಕ್ಕಲೆಬ್ಬಿಸುವುದು ಯಾವ ಇಲಾಖೆಯಿಂದಲೂ ಸಾಧ್ಯವಿಲ್ಲ. ನಾನು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದರು.
ಶಾಸಕ ಸಂಗಮೇಶ್ವರ್ ಮಾತನಾಡಿ, ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಎಲ್ಲ ಮುಖಂಡರಿಗೂ ಜಿಪಂ, ತಾಪಂ ಚುನಾವಣೆಯಲ್ಲಿ ಟಿಕೆಟ್ ನೀಡಲು ಸಾಧ್ಯ ಆಗುವುದಿಲ್ಲ. ಪಕ್ಷ ಯಾರನ್ನು ಗುರುತಿಸಿ ನೀಡುತ್ತದೆಯೋ ಅವರ ಪರವಾಗಿ ಕಾರ್ಯಕರ್ತರು, ಮುಖಂಡರು ಒಟ್ಟಾಗಿ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ಕೆಲಸ ಆಗಿಲ್ಲ ಎಂದು ವಿರೋಧಿಗಳು ಹೇಳುತ್ತಿದ್ದಾರೆ. ನಾನು ಅಧಿಕಾರಕ್ಕೆ ಬಂದಾಗಿನಿಂದ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದೇನೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಎಂಎಲ್‌ಸಿ ಬಲ್ಕಿಷ್ ಬಾನು, ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್.ಷಡಕ್ಷರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ರವಿಕುಮಾರ್, ಬಿ.ಕೆ.ಮೋಹನ್, ಗೀತಾ ರಾಜ್‌ಕುಮಾರ್, ರಿಯಾಜ್ ಅಹಮದ್, ಚನ್ನಪ್ಪ, ಸಿ.ಎಂ.ಖಾದರ್, ಮಣಿಶೇಖರ್, ಕದಿರೇಶ್, ಸುಕನ್ಯಾ, ರೇಣುಕಮ್ಮ, ಬಿ.ಕೆ.ಶಿವಕುಮಾರ್, ನಾಗೇಶ್ ಮತ್ತಿತರರಿದ್ದರು.