

ಆಯನೂರು: ಹೊಸೂರು ಗ್ರಾಮದ ವಾದಿರಾಜಾಶ್ರಮದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮೂರು ದಿನ ವಿಜೃಂಭಣೆಯಿಂದ ಜರುಗಿತು.
ಕಲಿಯುಗದ ಕಾಮಧೇನು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ದೇವರ ವಿಗ್ರಹಕ್ಕೆ ಕನಕಾಭಿಷೇಕ ನೆರವೇರಿಸಿದರು.
ನಂತರ ಮಾತನಾಡಿ, ಹೊಸೂರಿನ ವಾದಿರಾಜಾಶ್ರಮ ರಾಯರ ವಿಶೇಷ ಸನ್ನಿಧಾನ. ದೇಶದಲ್ಲಿ ಆಗುತ್ತಿರುವ ಪ್ರಕೃತಿ ವಿಕೋಪ ಹಾಗೂ ಮನುಷ್ಯನಿಂದ ಪ್ರಕೃತಿ ಮೇಲಾಗುತ್ತಿರುವ ದಬ್ಬಾಳಿಕೆ ದೇವರ ದಯೆಯಿಂದ ನಿಲ್ಲಲಿ, ಮನುಷ್ಯ ಸ್ವಾರ್ಥರಹಿತ ಜೀವನ ನಡೆಸಬೇಕು. ಎಲ್ಲರನ್ನು ರಕ್ಷಿಸು ಎಂದು ರಾಯರಲ್ಲಿ ಪ್ರಾರ್ಥಿಸಿದೆ ಎಂದರು. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಾಲತೇಶ್, ದಿವಾಕರ ಶೆಟ್ಟಿ, ರಾಜೇಶ ಕಾಮತ್, ಪದ್ಮಿನಿ, ಅಚ್ಚುತರಾವ್, ಶೇಷಗಿರಿ ವಿಜಯವಿಠಲ್ ಇತರರಿದ್ದರು.
ದೇವರ ಸನ್ನಿಧಿಯಲ್ಲಿ ಮೂರು ದಿನ ಸಂಗೀತ, ಹರಿವಾಯುಸ್ತುತಿ, ರಾಘವೇಂದ್ರ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಸರ್ವಸೇವೆ, ಮಹಿಳೆಯರಿಂದ ಭಜನೆ, ಪ್ರವಚನ, ಪಲ್ಲಕ್ಕಿ ಉತ್ಸವ ಹಾಗೂ ತೊಟ್ಟಿಲು ಸೇವಾ ಕಾರ್ಯ ನಡೆದವು. ಬೆಂಗಳೂರು, ಶಿವಮೊಗ್ಗ, ಆಯನೂರು ಹಾಗೂ ಸುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ರಾಯರ ಆರಾಧನೆಯಲ್ಲಿ ಪಾಲ್ಗೊಂಡಿದ್ದರು.