ಲೋಕಸಭೆ ಚುನಾವಣೆಗೂ ಮುಂಚೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ರಾಜಕೀಯ ಬೆಳವಣಿಗೆ : ಬಸವರಾಜ ಬೊಮ್ಮಾಯಿ

mng- sep 14- Basavaraja Bommayi
Published on

ಬೆಂಗಳೂರು:
ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ರಾಜಕಾರಣದಲ್ಲಿ ದೊಡ್ಡ ರಾಜಕೀಯ ಬೆಳವಣಿಗೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಶೆಟ್ಟರ್ ಅವರು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಕಾಂಗ್ರೆಸ್ ಮೇಲಿನ ಪ್ರೀತಿಯಿಂದ ಹೋಗಿರಲಿಲ್ಲ. ಬಿಜೆಪಿಯಲ್ಲಿ ಆಗಿರುವ ಬೇಸರದಿಂದ ಕಾಂಗ್ರೆಸ್‌ಗೆ ಹೋಗಿದ್ದರು ಎಂದರು.
ಶೆಟ್ಟರ್ ಅವರನ್ನು ನಾನು ಜನಸಂಘದಿಂದ ಬಹಳ ಹತ್ತಿರದಿಂದ ನೋಡಿದ್ದೇನೆ. ಅವರಿಗೆ ಕಾಂಗ್ರೆಸ್ ಡಿಎನ್‌ಎ ಒಗ್ಗುವುದಿಲ್ಲ. ಅವರ ದೇಹ ಮಾತ್ರ ಅಲ್ಲಿಗೆ ಹೋಗಿತ್ತು. ಅವರ ಮನಸ್ಸು ಬಿಜೆಪಿಯಲ್ಲಿಯೇ ಇತ್ತು. ಇದು ಕೇವಲ ಆರಂಭ. ಮುಂದಿನ ದಿನಗಳಲ್ಲಿ ಕೇವಲ ಬಿಜೆಪಿ ನಾಯಕರಷ್ಟೇ ಘರ್ ವಾಪಸಿ ಆಗುವುದಿಲ್ಲ. ಕಾಂಗ್ರೆಸ್‌ನ ಪ್ರಮುಖ ನಾಯಕರೂ ಕೂಡ ಪಕ್ಷಕ್ಕೆ ಬರಲಿದ್ದಾರೆ. ಚುನಾವಣೆ ನಂತರ ಕಾಂಗ್ರೆಸ್ ಇಬ್ಬಾಗವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಯಾವಾಗಲೂ ಬ್ಲಾಕ್ ಮೇಲ್ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಶೆಟ್ಟರ್ ಅವರನ್ನು ಯಾರೂ ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ ಎಂದರು.

*ಕಾಂಗ್ರೆಸ್ ಪಕ್ಷದೊಳಗಿನ ಉಸಿರುಗಟ್ಟುವ ವಾತಾವರಣ ತಡೆದುಕೊಳ್ಳಲಾಗದೆ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಸೇರಿದ್ದಾರೆ. ಇದು ಆಪರೇಶನ್ ಕಮಲವೇನಲ್ಲ. ಸಂಘ ಪರಿವಾರದ ಹಿನ್ನೆಲೆಯಿಂದ ಬೆಳೆದ ಅವರು ಮರಳಿ ಗೂಡಿಗೆ ಬಂದಿದ್ದಾರೆ.
-ಆರ್.ಅಶೋಕ್, ವಿರೋಧ ಪಕ್ಷದ ನಾಯಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net