ಮಹಿಳೆಯರ ವಿರುದ್ಧ ಅವಹೇಳನ ಮಾತು: ಕಾಂಗ್ರೆಸ್‌ ಶಾಸಕನ ವಿರುದ್ಧ ಕೇಸ್‌ ದಾಖಲು

FIR
Published on

ವಿದಿಶಾ (ಮಧ್ಯಪ್ರದೇಶ): ಕೇಂದ್ರ ಸಚಿವೆಯೊಬ್ಬರ ವಿರುದ್ಧ ಕೆಟ್ಟ ಪದ ಪ್ರಯೋಗ ಮಾಡುವ ಮೂಲಕ, ಮಹಿಳಾ ಸಮುದಾಯಕ್ಕೆ ಅವಹೇಳನಕಾರಿಯಾಗುವ ರೀತಿಯಲ್ಲಿ ನಡೆದುಕೊಂಡ ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಶಶಾಂಕ್‌ ಭಾರ್ಗವ್‌ ವಿರುದ್ಧ ಕೇಸು ದಾಖಲು ಮಾಡಲಾಗಿದೆ.

ವಿದಿಶಾದಲ್ಲಿ ಗುರುವಾರ ನಡೆದಿದ್ದ ಸೈಕಲ್‌ ರ್ಯಾಲಿ ಸಂದರ್ಭದಲ್ಲಿ, ಕೇಂದ್ರ ಸಚಿವೆಯ ವಿರುದ್ಧ ಅವಹೇಳನಕಾರಿ ಮಾತನಾಡಿರುವ ಆರೋಪವನ್ನು ಶಶಾಂಕ್‌ ಎದುರಿಸುತ್ತಿದ್ದಾರೆ.

‘ಕೇಂದ್ರದಲ್ಲಿ ಸಚಿವೆಯೊಬ್ಬರಿದ್ದು ಅವರು ತುಂಬಾ ಬಳೆಗಳನ್ನು ಹಾಕಿಕೊಳ್ಳುತ್ತಾರೆ. ನಾನು ಮಾಧ್ಯಮಗಳ ಮೂಲಕ ಆ ಸಚಿವೆಯನ್ನು ಕೇಳಿಕೊಳ್ಳುವುದು ಏನೆಂದರೆ, ಅವರು ಪ್ರಧಾನಿ ನರೇದ್ರ ಮೋದಿಯವರಿಗೆ ತೀರಾ ಹತ್ತಿರವಾಗಿದ್ದಾರೆ. ಆದ್ದರಿಂದ ಆ ಬಳಕೆಗಳನ್ನು ಪ್ರಧಾನಿಗೆ ತೊಡಲು ಕೊಡಬೇಕು. ಈ ಮೂಲಕ ಪೆಟ್ರೋಲ್‌ ದರವನ್ನು ಇಳಿಸುವಂತೆ ಕೇಳಬೇಕು‘ ಎಂದಿದ್ದಾರೆ.

ಇದು ಅಲ್ಲಿಯೇ ಇದ್ದ ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ. ಕೂಡಲೇ ಶಾಸಕ ಶಶಾಂಕ್‌ ವಿರುದ್ಧ ಪ್ರತಿಭಟನೆ ನಡೆಸಿರುವ ಬಿಜೆಪಿ ಕಾರ್ಯಕರ್ತರು ಶಶಾಂಕ್‌ರನ್ನು ಮಹಿಳಾ ವಿರೋಧಿ ಎಂದು ನಿಂದಿಸಿದ್ದಾರೆ.

ಕೂಡಲೇ ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಇವರ ವಿರುದ್ಧ ಲೈಂಗಿಕ ದೌರ್ಜನ್ಯ, ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ಅಧಿಕಾರಿಗಳಿಂದ ದುರ್ವರ್ತನೆ ಇತ್ಯಾದಿ ಆರೋಪಗಳ ಅಡಿ ಕೇಸನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಕೋತ್ವಾಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿರೇಂದ್ರ ಝಾ ಹೇಳಿದ್ದಾರೆ.

ಇದೇ ವೇಳೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಇದಾಗಲೇ ಶಶಾಂಕ್‌ಗೆ ನೋಟಿಸ್‌ ನೀಡಿದ್ದು, ಅವರಿಂದ ಸ್ಪಷ್ಟನೆ ಕೇಳಿದ್ದಾರೆ.

ಈ ಹೇಳಿಕೆಗೆ ಭಾರಿ ಟೀಕೆಗಳು ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net