

ಬೆಂಗಳೂರು: ಮೂತ್ರಪಿಂಡ ವೈಲ್ಯದ ಜೊತೆಗೆ ಹೃದಯ ಸಮಸ್ಯೆ ಹೊಂದಿದ್ದ 54 ವರ್ಷದ ವ್ಯಕ್ತಿಗೆ ಸಂಸದ ಹಾಗೂ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ನೇತೃತ್ವದ ವೈದ್ಯರ ತಂಡ ಕಾಂಪ್ಲೆಕ್ಸ್ ಅಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆಸಿ ಸ್ಟೆಂಟ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಯನಗರದ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗೆ ಹೃದಯದ ರಕ್ತನಾಳದಲ್ಲಿ ರಕ್ತ ಪರಿಚಲನೆ ಶೇ. 90 ಸ್ಥಗಿಗೊಂಡಿತ್ತು. ಪರೀಕ್ಷೆ ನಡೆಸಿದ ಬಳಿಕ ಹೊಸ ಆರ್ಬಿಟಲ್ ಅಥೆರೆಕ್ಟಮಿ ಸಾಧನ ಬಳಸಿ ಚಿಕಿತ್ಸೆ ಒದಗಿಸಲಾಗಿದೆ ಎಂದು ಡಾ. ಸಿ.ಎನ್. ಮಂಜುನಾಥ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಈ ಸಾಧನದ ನಿಖರ ಬೆಲೆ 3 ಲಕ್ಷ ರೂ. ಆಗಲಿದ್ದು, ಸಂಸದರ ವಿನಂತಿ ಮೇರೆಗೆ ಕಂಪನಿಯು ಈ ಸಾಧನವನ್ನು ಉಚಿತವಾಗಿ ಒದಗಿಸಿದೆ. ನಿವೃತ್ತಿ ನಂತರ ರಾಜಕೀಯ ಪ್ರವೇಶಿಸಿರುವ ಡಾ. ಸಿ.ಎನ್. ಮಂಜುನಾಥ್ ಅವರು ತಮ್ಮ ವೈದ್ಯಕೀಯ ವೃತ್ತಿಯನ್ನು ಮುಂದುವರೆಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.