'ಕ್ರೈಂನಿಂದ ದೂರವಿದ್ರೆ ಮಾತ್ರ...' ಖಾಕಿ ಬಲೆಗೆ ಸಿಕ್ಕಿಬಿದ್ದ ಯೂಟ್ಯೂಬರ್​! ಕಳಚಿಬಿತ್ತು ಮುಖವಾಡ | YouTuber Arrest

ವಿಜಯವಾಣಿ (23)
Published on

Youtuber Arrest: ತನ್ನ ಯೂಟ್ಯೂಬ್​ ಚಾನೆಲ್‌ಗೆ ಸಬ್​ಸ್ಕ್ರೈಬ್​ ಆದ ಜನರಿಗೆ, ಸದಾ ಪ್ರಾಮಾಣಿಕತೆ ಮತ್ತು ಅಪರಾಧ ಮುಕ್ತ ಜೀವನವನ್ನು ನಡೆಸುವುದು ಹೇಗೆ, ಕ್ರಿಮಿನಲ್ ಚಟುವಟಿಕೆಗಳಿಂದ ದೂರವಿರುವುದು ಹೇಗೆ? ಎಂದು ಮೋಟಿವೇಷನಲ್​ ವಿಡಿಯೋಗಳ ಮೂಲಕ ಗಮನ ಸೆಳೆದಿದ್ದ ಯುಟ್ಯೂಬರ್ ಇದೀಗ ತನ್ನ ಮಾತಿಗೆ ತಾನೇ ವಿರುದ್ಧವಾಗಿ ನಡೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಕಳ್ಳತನದ ಆರೋಪದಡಿ ಸಿಕ್ಕಿಬಿದ್ದಿರುವ ಯೂಟ್ಯೂಬರ್​ ಅನ್ನು ಒಡಿಶಾ ರಾಜ್ಯದ ಭುವನೇಶ್ವರ ಮೂಲದ ಮನೋಜ್ ಸಿಂಗ್ ಎಂದು ಗುರುತಿಸಲಾಗಿದೆ. 'ಚೇಂಜ್ ಯುವರ್ ಲೈಫ್' ಎಂಬ ಯುಟ್ಯೂಬ್​ ಚಾನೆಲ್ ನಡೆಸುತ್ತಿದ್ದ ಮನೋಜ್, ಸದ್ಯ ಕಳ್ಳತನ ಕೇಸ್​ನಲ್ಲಿ ಅರೆಸ್ಟ್​ ಆಗಿದ್ದಾನೆ. ವರದಿಗಳ ಪ್ರಕಾರ, ಈತನ ವಿರುದ್ಧ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿನ್ನಾಭರಣಗಳು ಮತ್ತು ಹಣವನ್ನು ಕದ್ದ ಪ್ರಕರಣದಲ್ಲಿ ಮನೋಜ್ ಸಿಂಗ್​ ಸಿಕ್ಕಿಬಿದ್ದಿರುವುದಾಗಿ ಖಾಕಿ ಪಡೆ ತಿಳಿಸಿದೆ.

ಕಳ್ಳತನದಲ್ಲಿ ನಿಪುಣ

ತನಿಖಾಧಿಕಾರಿಗಳ ಪ್ರಕಾರ, ಆರೋಪಿ ಬೆಳಗ್ಗೆ ಸಮಯದಲ್ಲಿ ಬೀಗ ಹಾಕಿರುವ ಪ್ರತ್ಯೇಕ ಮನೆಗಳನ್ನು ಟಾರ್ಗೆಟ್​ ಮಾಡಿಕೊಂಡು, ಕಳ್ಳತನದ ಕೆಲಸದಲ್ಲಿ ತೊಡಗುತ್ತಿದ್ದ. ಅತ್ತ ತನ್ನ ಯುಟ್ಯೂಬ್​ ವೀಕ್ಷಕರನ್ನು, ಶಿಸ್ತುಬದ್ಧ ಜೀವನ ಮತ್ತು ಸಮಗ್ರ ಬದುಕು ನಡೆಸುವಂತೆ ಪ್ರೇರಣೆ ನೀಡುತ್ತಿದ್ದ ಮನೋಜ್​, ನಾವು ಕ್ರೈಂ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಹಾಗೇನಾದರೂ ಮಾಡಿದ್ದಲ್ಲಿ, ಜೀವನದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ಎನ್ನುತ್ತಿದ್ದ. ಆದರೆ, ನಿಜ ಜೀವನದಲ್ಲಿ ತನ್ನ ಮಾತಿಗೆ ತಾನೇ ವಿರುದ್ಧವಾಗಿ ನಡೆದುಕೊಂಡಿದ್ದು, ಅದೇ ಕ್ರಿಮಿನಲ್​ ಕೆಲಸಗಳಲ್ಲಿ ತೊಡಗಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಮುಂದುವರಿದ ತನಿಖೆ

ಸದ್ಯ ಬಂಧನವಾಗಿರುವ ಮನೋಜ್ ಸಿಂಗ್​ನನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಆತನ ವಿರುದ್ಧ ಇನ್ಯಾವುದಾದರೂ ಪ್ರಕರಣಗಳು ಇವೆಯೇ? ಎಂದು ತನಿಖೆ ಮುಂದುವರೆಸಿದ್ದಾರೆ. ಈ ಬಗ್ಗೆ ನಿವಾಸಿಗಳು ಜಾಗರೂಕರಾಗಿರಬೇಕು ಮತ್ತು ಆನ್‌ಲೈನ್​ನಲ್ಲಿ ಕಾಣಿಸಿಕೊಳ್ಳುವ ಅಥವಾ ಬಣ್ಣ ಬಣ್ಣದ ಮಾತುಗಳನ್ನಾಡುವ ವ್ಯಕ್ತಿಗಳನ್ನು ನಂಬಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net