ಲಕ್ಷಾಂತರ ಕ್ರಾಂತಿಕಾರಿಗಳ ಪ್ರೇರಣಾಶಕ್ತಿ: ಇಂದು ಹುತಾತ್ಮ ದಿನ

Huthathma Dina
Published on

ಕ್ರಾಂತಿಕಾರಿಗಳ ಶಕ್ತಿ ಹೆಚ್ಚಿಸಿದವರು ಭಗತ್ ಸಿಂಗ್, ರಾಜಗುರು, ಸುಖದೇವ್ ಮತ್ತು ಚಂದ್ರಶೇಖರ ಆಜಾದರು. ಪಂಜಾಬಿನ ಅತ್ಯಂತ ಸಣ್ಣ ಹಳ್ಳಿಯ ಭಗತ್ ಪ್ರೇರಣೆ ಪಡೆಯಲು ಸಾಕಷ್ಟು ಸಂಗತಿಗಳಿದ್ದವು. ಬ್ರಿಟಿಷರ ವಿರುದ್ಧ ಕಾದಾಡಿ ಗಡಿಪಾರಿಗೆ ಒಳಗಾಗಿದ್ದ ಚಿಕ್ಕಪ್ಪ ಅಜಿತ್ ಸಿಂಗ್, ವಿದೇಶದಲ್ಲಿ ಬ್ರಿಟಿಷರ ವಿರುದ್ಧ ತೊಡೆತಟ್ಟಿದ್ದ ಗದರ್​ನ ಕ್ರಾಂತಿಕಾರಿಗಳು, ಜಲಿಯನ್​ವಾಲಾಬಾಗ್ ಹತ್ಯಾಕಾಂಡ, ಕೊನೆಗೆ ಸೋತಂತೆನಿಸಿದ ಗಾಂಧೀಜಿಯವರ ಅಹಿಂಸಾತ್ಮಕ ಚಳವಳಿಗಳು. ಇವೆಲ್ಲವುಗಳಿಂದಲೂ ಪ್ರೇರಣೆ ಪಡೆದ ಆತ ಹಿರಿಯರು ಹಾಕಿಕೊಟ್ಟ ಇದೇ ಕ್ರಾಂತಿಕಾರ್ಯದ ಜಾಡಿನಲ್ಲಿ ಹೆಜ್ಜೆ ಹಾಕುತ್ತ ಇಂದಿನ ದಿನವೇ ರಾಜಗುರು, ಸುಖದೇವ್ ಜತೆ ಸೇರಿ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆಗೈದ!

ಸಂಸತ್ತಿನಲ್ಲಿ ಅಂದೇನಾಯಿತು?: ಅಂದು 1929ರ ಏಪ್ರಿಲ್ 8. ಭಗತ್ ಮತ್ತು ಆತನ ಸ್ನೇಹಿತ ಬಟುಕೇಶ್ವರ ದತ್ತರು ಸಂಸತ್​ನ ವೀಕ್ಷಕರ ಆಸನಗಳಲ್ಲಿ ಕುಳಿತಿದ್ದರು. ಅಧಿವೇಶನದಲ್ಲಿ ಭಾಷಣ ನಡೆಯುತ್ತಿದ್ದಂತೆಯೇ ಎದ್ದುನಿಂತ ಅವರಿಬ್ಬರೂ ಸ್ಪೀಕರ್ ಸ್ಥಾನದ ಹಿಂದಿನ ಗೋಡೆಗೆ ಗುರಿಯಿಟ್ಟು ಬಾಂಬ್ ಎಸೆದರು. ಬೃಹತ್ ಸ್ಪೋಟದಿಂದ ಗಾಬರಿಯಾಗಿ ಎಲ್ಲರೂ ಹೊರಗೋಡತೊಡಗಿದರು. ಬಾಂಬ್ ದಾಳಿಯಿಂದ ಯಾವ ಸಾವು-ನೋವೂ ಆಗಲಿಲ್ಲ; ಬ್ರಿಟಿಷರ ಗಮನಸೆಳೆದು ಸತ್ಯ ಅರುಹುವುದೇ ಭಗತ್, ಅವನ ಗೆಳೆಯರ ಉದ್ದೇಶವಾಗಿತ್ತು. ಹೀಗಾಗಿ, ರಿವಾಲ್ವಾರ್ ಎಸೆದು, ತಪ್ಪಿಸಿಕೊಳ್ಳುವ ಯತ್ನವನ್ನೂ ಮಾಡದೆ ‘ಇನ್ಕ್ವಿಲಾಬ್ ಜಿಂದಾಬಾದ್’ ಎಂದು ಕೂಗುತ್ತಲೇ ಸೆರೆಯಾದರು. ಅವರನ್ನು ಬಂಧಿಸಿ ಸೆಂಟ್ರಲ್ ಜೈಲಿನಲ್ಲಿರಿಸಲಾಯಿತು.

***

ಯುವಶಕ್ತಿಯ ಗರ್ಜನೆ: ನ್ಯಾಯಾಲಯದಲ್ಲಿ ಭಗತ್ ಮತ್ತು ಬಟುಕೇಶ್ವರ ದತ್ತರ ವಿಚಾರಣೆ ಆರಂಭವಾಯಿತು. ತನ್ನ ಪರ ತಾನೇ ವಾದಿಸಲು ಭಗತ್ ನಿರ್ಧರಿಸಿದ. ಅವನ ವಾದ, ವಿಚಾರಸರಣಿ ಎಲ್ಲರನ್ನೂ ನಿಬ್ಬೆರಗಾಗಿಸಿತು. ತನ್ನ ಕೃತ್ಯ ಸ್ವಾತಂತ್ರ್ಯ ಸಂಗ್ರಾಮದ ಸಂಕೇತವೆಂದೂ, ಬ್ರಿಟಿಷರ ಸಾಮ್ರಾಜ್ಯವಾದವನ್ನು ವಿರೋಧಿಸಿ ಚುನಾಯಿತರಾಗಿದ್ದ ಭಾರತೀಯ ಪ್ರತಿನಿಧಿಗಳ ಮೇಲೆ ಬ್ರಿಟಿಷರು ನಡೆಸಿದ ದಬ್ಬಾಳಿಕೆಗೆ ಪ್ರತ್ಯುತ್ತರವೆಂದೂ ಭಗತ್ ವಾದಿಸಿದ. ಅಷ್ಟು ಹೊತ್ತಿಗಾಗಲೇ ಸ್ವಾತಂತ್ರ್ಯ ಹೋರಾಟದ ಕಿಡಿ ದೇಶದೆಲ್ಲೆಡೆ ವ್ಯಾಪಿಸಿ, ಭಗತ್​ನ ಗುಣಗಾನ ನಡೆಯುತ್ತಿತ್ತು. ಭಗತ್, ಅವನ ಸ್ನೇಹಿತರು ಯುವಶಕ್ತಿಯ, ಸ್ವಾತಂತ್ರ್ಯ ಸಂಗ್ರಾಮದ ಹೊಸ ಸಂಕೇತವಾಗಿದ್ದರು.

ಅದೇ ವೇಳೆಗೆ, ಭಗತ್​ನ ಸಂಘಟನೆಯ ಸಹಚರರನ್ನು ಲಾಹೋರ್​ನಲ್ಲಿ ಬಂಧಿಸಿ, ಸ್ಯಾಂಡರ್ಸ್ ಕೊಲೆ ಹಾಗೂ ಕಾನೂನುವಿರೋಧಿ ಕಾರ್ಯಾಚರಣೆಯ ಆಪಾದನೆ ಹೊರಿಸಲಾಗಿತ್ತು. ಇತ್ತ ನ್ಯಾಯಾಲಯದಲ್ಲಿ ಭಗತ್​ನ ವಾದಗಳೆಲ್ಲ ತಿರಸ್ಕೃತಗೊಂಡು, ಭಗತ್, ರಾಜಗುರು ಮತ್ತು ಸುಖದೇವ್​ರನ್ನು 1931ರ ಮಾರ್ಚ್ 23ರಂದು ಗಲ್ಲಿಗೇರಿಸಬೇಕೆಂಬ ತೀರ್ಪಬಂತು. ಸಂಗಡಿಗರ ಜತೆ ನೇಣುಗಂಬವೇರಿದ ಭಗತ್ ಲಕ್ಷಾಂತರ ಯುವಕರು ತಾಯಿನಾಡಿನ ಮುಕ್ತಿಗಾಗಿ ಹೋರಾಡಲು ಪ್ರೇರಣೆಯಾದ. ಎಂದೂ ಆರದ ದೇಶಭಕ್ತಿಯ ಕಿಡಿಯನ್ನು ಹೊತ್ತಿಸಿದ.

ಗಲ್ಲಿಗೇರುವ ಹಿಂದಿನ ದಿನ: 1931ರ ಮಾರ್ಚ್ 22 ಅಂದರೆ ಗಲ್ಲಿಗೇರುವ ಹಿಂದಿನ ದಿನ ಭಗತ್ ಸಿಂಗ್ ಪರ ವಕೀಲ ಪ್ರಾಣ್​ನಾಥ್ ಮೆಹ್ತಾ, ಭಗತ್​ನನ್ನು ಕೊನೆಯದಾಗಿ ಭೇಟಿಯಾದ ಸಂದರ್ಭ. ಮೆಹ್ತಾರನ್ನು ಕಾಣುತ್ತಿದ್ದಂತೆ ಭಗತ್ ಮಂದಹಾಸದೊಂದಿಗೆ ನಮಸ್ಕರಿಸುತ್ತ, ‘ನಾನು ಹೇಳಿದ್ದ ‘ದಿ ರೆವಲೂಷನರಿ ಲೆನಿನ್’ ಪುಸ್ತಕ ತಂದಿದ್ದೀರಾ?’ ಎಂದು ಕೇಳಿದ. ಪುಸ್ತಕ ಕೈಗೆ ಬರುತ್ತಿದ್ದಂತೆ ಧನ್ಯವಾದ ಹೇಳಿ ಉಲ್ಲಾಸದಿಂದ ಪುಸ್ತಕ ಓದಲು ಶುರುಮಾಡಿಯೇಬಿಟ್ಟ!

ನಾಳೆ ಗಲ್ಲಿಗೇರುವ ವ್ಯಕ್ತಿ ಹೀಗೆ ಇರಲು ಸಾಧ್ಯವೇ? ಎಂದು ರೋಮಾಂಚನಗೊಂಡ ಮೆಹ್ತಾ, ‘ದೇಶಕ್ಕೆ ಏನಾದರೂ ಸಂದೇಶ ನೀಡುತ್ತೀರಾ?’ ಎಂದಾಗ ಭಗತ್ ಸಿಂಗ್ ಪುಸ್ತಕದಿಂದ ತಲೆಯೆತ್ತದೆ ‘ಸಾಮ್ರಾಜ್ಯಷಾಹಿಗೆ ಧಿಕ್ಕಾರ, ಕ್ರಾಂತಿ ಚಿರಾಯುವಾಗಲಿ- ಈ ಎರಡು ಘೊಷಣೆಗಳನ್ನು ತಿಳಿಸಿ’ ಎಂದ. ‘ನಿನಗೇನಾದರೂ ಆಸೆ ಇದೆಯಾ?’ ಎಂಬ ಮೆಹ್ತಾರ ಪ್ರಶ್ನೆಗೆ, ‘ಹೌದು, ಈ ದೇಶದಲ್ಲಿ ಮತ್ತೆ ಹುಟ್ಟುವ ಆಸೆಯಿದೆ; ಮತ್ತೆ ಹುಟ್ಟಿದರೆ ಈ ದೇಶದ ಸೇವೆಮಾಡಬಹುದು’ ಎಂದುತ್ತರಿಸಿದ!

ಗಲ್ಲಿಗೇರುವ ದಿನವೂ, ನೇಣುಗಂಬದ ಹಾದಿಯಲ್ಲಿ ಭಗತ್ ಸಿಂಗ್ ಗಟ್ಟಿಯಾಗಿ ಕ್ರಾಂತಿ ಕುರಿತಾದ ಭಾಷಣವೊಂದನ್ನು ಮಾಡಿದ. ಉಳಿದ ಕೈದಿಗಳು ರೋಮಾಂಚನಗೊಂಡರು. ‘ಸರ್ಫ್​ರೋಷ್ ಕಿ ತಮನ್ನಾ ....’, ‘ರಂಗ್ ದೇ ಬಸಂತಿ ಚೋಲಾ....’ ಹಾಡುಗಳು ಪ್ರತಿಧ್ವನಿಸಿದವು. ಇಡೀ ಬಂದೀಖಾನೆಯು ‘ಇಂಕ್ವಿಲಾಬ್ ಜಿಂದಾಬಾದ್’, ‘ಹಿಂದುಸ್ತಾನ್ ಆಜಾದ್ ಹೋ’ ಘೊಷಣೆಗಳಿಂದ ತುಂಬಿಹೋಯಿತು.

ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಈ ಮೂವರ ಮುಖದಲ್ಲೂ ಉತ್ಸಾಹ ಮತ್ತು ನಗು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹೊತ್ತಿಸಬಲ್ಲ, ಸ್ಪೂರ್ತಿ ತುಂಬಬಲ್ಲ ಅವರ ವರ್ತನೆಗೆ ಜೈಲಿನ ಅಷ್ಟೂ ಅಧಿಕಾರಿಗಳು ಬೆಚ್ಚಿಬಿದ್ದಿದ್ದರು. ನೇಣಿಗೆ ಕೊರಳೊಡ್ಡುವ ಮುನ್ನವೂ ಆ ಮೂವರ ಮುಖಗಳಿಂದ ನಗು ಮಾಸಿರಲಿಲ್ಲ...

ಪ್ರಖರ ರಾಷ್ಟ್ರಭಕ್ತಿ

ಸ್ಯಾಂಡರ್ಸ್​ನ ಹತ್ಯೆ ಮಾಡಿದ ನಂತರ ಭಗತ್, ರಾಜಗುರು, ಸುಖದೇವ್, ಆಜಾದ್ ಎಲ್ಲ ಕಾಣೆಯಾಗಿಬಿಟ್ಟರಲ್ಲ; ಕೆಲಸ ನಿಲ್ಲಲಿಲ್ಲ, ಸಂಘಟನೆ ವಿಸ್ತಾರವಾಯ್ತು ಅಷ್ಟೇ. ಈ ಬಗೆಯ ಅನೇಕ ಕ್ರಾಂತಿಕಾರಿಗಳು ತಾವು ನೇಣಿಗೇರುವ ಮುನ್ನ ಹೇಳುತ್ತಿದ್ದ ಗೀತೆಗಳು ತರುಣರ ಹೃದಯದಲ್ಲಿ ಇಂದಿಗೂ ಕಿಡಿ ಎಬ್ಬಿಸಬಲ್ಲಂಥವು. ರಾಮಪ್ರಸಾದ್ ಬಿಸ್ಮಿಲ್ ರಚಿಸಿದ ಗೀತೆಗಳು ಅಂದಿನ ಕಾಲದಲ್ಲಿ ಹೀಗೆ ತರುಣರ ಮನಸ್ಸನ್ನು ಹಿಡಿದಿಟ್ಟಂಥವು. ಸ್ವತಃ ಬಿಸ್ಮಿಲ್ ನೇಣುಶಿಕ್ಷೆ ಘೊಷಣೆಯಾದಾಗ ಒಂದಿನಿತೂ ದುಃಖ ಪಡದೆ ನ್ಯಾಯಾಧೀಶರ ಅನುಮತಿ ಪಡೆದು ನ್ಯಾಯಾಲಯದ ಹೊರಗೆ ಹಾಡಿದ ಹಾಡಿನ ಕುರಿತಂತೆ ಪತ್ರಿಕೆಗಳು ವಿಸ್ತಾರವಾಗಿ ಬರೆದಿದ್ದವು. ಭಗತ್ ಸಿಂಗ್ ನೇಣಿಗೇರುವ ಮುನ್ನ ಹಾಡಿದ ‘ರಂಗ್​ದೇ ಬಸಂತಿ ಚೋಲಾ’ ಇಂದಿಗೂ ರಕ್ತ ಬೆಚ್ಚಗೆ ಮಾಡಬಲ್ಲದು. 20ನೇ ಶತಮಾನದ ಆರಂಭದಲ್ಲಿ ಪಂಜಾಬಿನಲ್ಲಿ ನಡೆದ ರೈತ ಚಳುವಳಿಗೆ ವೇಗ ಕೊಟ್ಟಿದ್ದೂ ಇಂಥದ್ದೇ ಒಂದು ಗೀತೆ, ‘ಪಗಡೀ ಸಂಬ್ಹಾಲ್ ಜಟ್ಟಾ!’ ಬ್ರಿಟಿಷರು ನೇಮಿಸಿದ್ದ ಸೆಡಿಶನ್ ಕಮಿಟಿ ಕ್ರಾಂತಿಕಾರಿಗಳ ಕುರಿತಂತೆ ಅಧ್ಯಯನವನ್ನು ನಡೆಸಿ ವರದಿಯೊಂದನ್ನು ಕೊಟ್ಟಿತ್ತು. ಅದರಲ್ಲಿ 186 ಕ್ರಾಂತಿಕಾರಿಗಳ ಕುರಿತಂತೆ ವಿಸ್ತಾರವಾಗಿ ವಿವರ ಸಂಗ್ರಹಿಸಿ 70ರಷ್ಟು ಕ್ರಾಂತಿಕಾರಿಗಳು 19ರಿಂದ 25ರ ನಡುವಿನವರು ಎಂದು ಹೇಳಿತ್ತು. ಅದರರ್ಥ ತರುಣರಲ್ಲಿದ್ದ ನವೋತ್ಸಾಹವನ್ನು ಬ್ರಿಟಿಷರ ವಿರುದ್ಧದ ಕೆಚ್ಚಾಗಿ ಪರಿವರ್ತಿಸಲು ಈ ಮಾರ್ಗ ಯಶಸ್ವಿಯಾಗಿತ್ತು. ಸ್ವಾಯತ್ತತೆ ಕೊಟ್ಟರೂ ಸಾಕು ಎಂದು ಕಾಂಗ್ರೆಸ್ಸು ಬ್ರಿಟಿಷರ ಬಳಿ ಅಂಗಲಾಚುತ್ತಿದ್ದರೂ ಭಗತ್ ಸಿಂಗ್ ನೇತೃತ್ವದ ಕ್ರಾಂತಿಕಾರಿಗಳು ಮಾತ್ರ ಪೂರ್ಣಸ್ವರಾಜ್ಯದ ಕಲ್ಪನೆಯನ್ನೇ ಬಲವಾಗಿ ಪ್ರತಿಪಾದಿಸಿದ್ದರು. ಕ್ರಾಂತಿಕಾರಿಗಳಲ್ಲಿದ್ದ ಸ್ವಾಭಿಮಾನ ಎಷ್ಟು ತೀವ್ರವಾಗಿತ್ತೆಂದರೆ ಬ್ರಿಟಿಷರು ಒಳ್ಳೆಯ ಆಡಳಿತವನ್ನು ನಡೆಸಿದಾಗ್ಯೂ ಅದು ಅವರಿಗೆ ಬೇಡವಾಗಿತ್ತು. ಪರಿಪೂರ್ಣ ಸ್ವಾತಂತ್ರ್ಯವೊಂದೇ ಅವರ ಗುರಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net