

ಹೊಳೆಹೊನ್ನೂರು: ಪ್ರತಿಭಾವಂತರನ್ನು ಪುರಸ್ಕರಿಸಿದರೆ ಮತ್ತಷ್ಟು ಸಾಧನೆಗೆ ಪ್ರೇರಣೆ ದೊರೆಯುತ್ತದೆ ಎಂದು ಮುಖಂಡ ಸೀಗೆಬಾಗಿ ವಸಂತಕುಮಾರ್ ಹೇಳಿದರು.
ಕಲ್ಲಿಹಾಳ್ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಹಣ ಇದ್ದರೆ ಸಾಲದು, ಪ್ರತಿಭೆಗಳಿಗೆ ಕೊಟ್ಟು ಪ್ರೋತ್ಸಾಹಿಸುವ ಹೃದಯ ಶ್ರೀಮಂತಿಕೆ ಹೊಂದಿರಬೇಕು. ಆಗ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಸಹಕಾರಿ ಆಗುತ್ತದೆ. ಈ ದಿಸೆಯಲ್ಲಿ ಕಲ್ಲಿಹಾಳ್ ಗ್ರಾಮದ ವೈದ್ಯ ರತ್ನಾಕರ್ ಅವರು 12 ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಿದ್ದಾರೆ ಎಂದರು.
ಕಾಲೇಜು ಪ್ರಾಚಾರ್ಯೆ ಸಿ.ಎನ್.ಪಂಕಜಾ, ದಾನಿಗಳಾದ ಡಾ. ರತ್ನಾಕರ್, ನಿವೃತ್ತ ಪ್ರಾಚಾರ್ಯೆ ಅನಿತಾ ವೈ. ದಾಮೋದರ್, ನಿವೃತ್ತ ಉಪನ್ಯಾಸಕ ಎಚ್.ಕೆ.ಗೋಪಾಲಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪುರುಷೋತ್ತಮ್, ಸದಸ್ಯ ಲಿಂಗರಾಜ್, ಉಪನ್ಯಾಸಕರಾದ ಎನ್.ಮಂಜುನಾಥ, ಬಿ.ಉದಯಕುಮಾರ್, ಸಿ.ಎನ್.ಸತೀಶ್ ಇತರರಿದ್ದರು.