ಸಾಲ ತೀರಿಸಲು ತಾಯಿಯ ಸ್ನೇಹಿತೆ ಮನೆಗೆ ಕನ್ನ;ಮೆಕಾನಿಕಲ್ ಇಂಜಿನಿಯರ್ ಸೆರೆ

arrest
Published on

ಬೆಂಗಳೂರು: ತಾಯಿಯ ಸ್ನೇಹಿತೆ ಮನೆಯಲ್ಲಿ ಕಳ್ಳತನ ಮಾಡಿದ್ದ ಇಂಜಿನಿಯರಿಂಗ್ ಪದವೀಧರನನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ರಸ್ತೆಯ ಟೆಲಿಕಾಂ ಲೇಔಟ್ ನಿವಾಸಿ ಮದನ್ ಬಂಧಿತ. ಈತನಿಂದ 6.57 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 30 ಸಾವಿರ ರೂ. ಮೌಲ್ಯದ 458 ಗ್ರಾಂ ಬೆಳ್ಳಿ, 1.35 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಟೆಲಿಕಾಂ ಲೇಔಟ್‌ನ 6ನೇ ಅಡ್ಡರಸ್ತೆಯಲ್ಲಿ ಬೆಳಗ್ಗೆ ಕಳ್ಳತನ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಿದ ಕೆ.ಪಿ.ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್ ರವಿಪ್ರಕಾಶ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೆಲಿಕಾಂ ಲೇಔಟ್‌ನಲ್ಲಿ ಕುಟುಂಬದ ಜತೆ ನೆಲೆಸಿದ್ದ ಮದನ್, ಮೆಕಾನಿಕಲ್ ಇಂಜಿನಿಯರ್ ಪದವಿ ಮುಗಿಸಿ ಮೈಸೂರು ರಸ್ತೆ ಕುಂಬಳಗೂಡುನಲ್ಲಿ ಅಲ್ಯೂಮಿನಿಯಂ ಕಂಪನಿ ನಡೆಸುತ್ತಿದ್ದ. ಕೆಲ ತಿಂಗಳ ಹಿಂದೆ ಆಕಸ್ಮಿಕ ಅಗ್ನಿ ದುರಂತ ಸಂಭವಿಸಿ ಕಂಪನಿ ಸಂಪೂರ್ಣವಾಗಿ ಅಗ್ನಿಗೆ ಆಹುತಿ ಆಗಿತ್ತು. ಈ ದುರಂತಕ್ಕೆ ಆತನಿಗೆ ವಿಮೆ ಸಹ ಸಿಗಲಿಲ್ಲ. 68 ಲಕ್ಷ ರೂ. ನಷ್ಟವಾಗಿದ್ದು, ಅದರಿಂದ ಪಾರಾಗಲು ಕಳ್ಳತನ ಸಂಚು ರೂಪಿಸಿದ್ದ.

ತನ್ನ ತಾಯಿಯ ಗೆಳತಿ ಐಮಾವತಿ ಎಂಬುವರು ಮದನ್‌ಗೆ ಪರಿಚಯ ಇತ್ತು. ಅವರ ಮನೆಗೆ ಬೀಗ ಹಾಕಿಕೊಂಡು ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ವಾಯು ವಿಹಾರಕ್ಕೆ ಹೋಗುವ ಸಂಗತಿ ತಿಳಿದಿದ್ದ. ಆ ವೇಳೆ ಮನೆಗೆ ಕನ್ನ ಹಾಕಲು ಯೋಜಿಸಿದ್ದ. ಜ.17ರಂದು ಐಮಾವತಿ ವಾಯುವಿಹಾರಕ್ಕೆ ತೆರಳಿದ ಬಳಿಕ ಮರ ಕತ್ತರಿಸುವ ಯಂತ್ರದಿಂದ ಬಾಗಿಲು ಕೊರೆದು ಒಳನುಗ್ಗಿದ ಮದನ್, ಚಿನ್ನಾಭರಣ ದೋಚಿದ್ದ.

ಪೊಲೀಸರಿಗೆ ಸುಳಿವು ಸಿಗದಂತೆ ಕೈಗವಸು ಹಾಕಿಕೊಂಡು ಮನೆಯಲ್ಲಿ ವಸ್ತುಗಳನ್ನು ಮುಟ್ಟಿದ್ದ. ಸಿಸಿ ಕ್ಯಾಮರಾ ಡಿವಿಆರ್ ಅನ್ನು ಸಹ ಕದ್ದಿದ್ದ. ಅಲ್ಲದೆ ಶ್ವಾನ ದಳವು ಸಹ ತನ್ನ ಹೆಜ್ಜೆ ಗುರುತು ಪತ್ತೆಹಚ್ಚಬಾರದು ಎಂದು ಕಳ್ಳತನ ಮಾಡಿದ ಬಳಿಕ ಆ ಮನೆ ತುಂಬ ಖಾರದ ಪುಡಿ ಚೆಲ್ಲಾಡಿದ್ದ. ಆದರೆ ಘಟನಾ ಸ್ಥಳದ ಸಮೀಪದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮದನ್ ಜಾಡು ಲಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net