ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾದ ತಾಯಿ-ಮಗ

sucide
Published on

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ತಾಯಿ ಮತ್ತು ಮಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ರಾಜಧಾನಿಯಲ್ಲಿ ನಡೆದಿದೆ. ಯಲಹಂಕದ ಆರ್‌ಎನ್‌ಜೆಡ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಮ್ಯಾ ಶ್ರೀಧರ್(೪೩) ಮತ್ತು ಆಕೆಯ ಪುತ್ರ ಭಾರ್ಗವ್ (೧೩) ಆತ್ಮಹತ್ಯೆ ಮಾಡಿಕೊಂಡವರು. ಪ್ರಾಥಮಿಕ ತನಿಖೆಯಲ್ಲಿ ಕೆಲ ತಿಂಗಳ ಹಿಂದೆ ರಮ್ಯಾ ಪತಿ ಶ್ರೀಧರ್ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದರು. ಇದರಿಂದ ತಾಯಿ, ಮಗ ಮಾನಸಿಕ ಖಿನ್ನತಗೊಳಗಾಗಿದ್ದರು. ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಯಲಹಂಕ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶ ಮೂಲದ ರಮ್ಯಾ, ಸಾಫ್ಟ್‌ವೇರ್ ಇಂಜಿನಿಯರ್ ಶ್ರೀಧರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಮೃತ ಭಾರ್ಗವ್ ಹಾಗೂ ಒಂದು ಹೆಣ್ಣು ಮಗಳು ಇದ್ದಾಳೆ. ರಮ್ಯಾ ದಂಪತಿಯದ್ದು ಅಂತಾರ್ಜಾತಿಯ ವಿವಾಹ. ದಂಪತಿ ಮಕ್ಕಳ ಜತೆ ನಗರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಮೊದಲ ಪುತ್ರಿ ಪಿಜಿಯಲ್ಲಿ ಉಳಿದುಕೊಂಡು ಓದುತ್ತಿದ್ದಳು.
ಈ ಮಧ್ಯೆ ಶ್ರೀಧರ್‌ಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಮೂರು ತಿಂಗಳ ಹಿಂದೆ ಮೃತಪಟ್ಟಿದ್ದರು. ಅದರಿಂದ ರಮ್ಯಾಗೆ ಮನೆ ನಿರ್ವಹಣೆ ಕಷ್ಟವಾಗಿತ್ತು. ಫ್ಲಾೃಟ್ ಬಾಡಿಗೆ, ಮಕ್ಕಳ ಶಾಲಾ-ಕಾಲೇಜು ಶುಲ್ಕ, ಮನೆ ನಿರ್ವಹಣೆಗಾಗಿ ಸಾವಿರಾರು ರೂ. ಅಗತ್ಯವಿತ್ತು. ಆದರೆ, ಅಷ್ಟೊಂದು ಹಣ ಹೊಂದಿಸಲು ರಮ್ಯಾಗೆ ಕಷ್ಟವಾಗಿತ್ತು. ಇದೇ ಕಾರಣಕ್ಕೆ ಖಿನ್ನತೆಗೊಳಗಾಗಿದ್ದರು ಎಂದು ಹೇಳಲಾಗಿದೆ. ಮತ್ತೊಂದೆಡೆ ಶ್ರೀಧರ್ ಮೃತಪಟ್ಟ ಕೆಲ ದಿನಗಳಲ್ಲೇ ತನ್ನ ಸಂಬಂಧಿಕರ ಬಳಿ ತಾಯಿ ಮತ್ತು ಮಗ ನಾವು ಕೂಡ ಸಾಯುತ್ತೇವೆ. ಜೀವನ ಕಷ್ಟವಾಗಿದೆ ಎಂದು ಹೇಳಿಕೊಳ್ಳುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕುಗ್ಗಿ ಹೋಗಿದ್ದ ತಾಯಿ-ಮಗ:
ರಮ್ಯಾ ಅವರ ೧೯ ವರ್ಷದ ಪುತ್ರಿ ಮೊದಲಿನಿಂದಲೂ ಪಿಜಿಯಲ್ಲಿ ವಾಸವಾಗಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಎರಡು ದಿನಕ್ಕೊಮ್ಮೆ ತಾಯಿಗೆ ಕರೆ ಮಾಡಿ ಮಾತಾಡುತ್ತಿದ್ದರು. ಜುಲೈ ೯ರಂದು ರಾತ್ರಿ ತಾಯಿಗೆ ಕರೆ ಮಾಡಿ ಮಾತಾಡಿದ್ದಾರೆ. ಈ ವೇಳೆಯೂ ತಾಯಿ ಮತ್ತು ಸಹೋದರ ಸಾಯುವ ಮಾತಾಡಿದ್ದರು. ಜತೆಗೆ ತಂದೆ ಮೃತಪಟ್ಟ ಬಳಿಕ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದರು ಎಂದು ಮೃತ ರಮ್ಯಾ ಪುತ್ರಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲು ಪುತ್ರ ನಂತರ ತಾಯಿ ಆತ್ಮಹತ್ಯೆ:
ಜುಲೈ ೯ರಂದು ರಾತ್ರಿ ಸಹೋದರಿ ಜತೆ ಮಾತಾಡಿದ ಭಾರ್ಗವ್, ಬಳಿಕ ಕೋಣೆಗೆ ಹೋಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ಬಳಿಕ ಆತನ ಕೋಣೆಗೆ ಹೋದ ತಾಯಿ, ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು, ಆತನನ್ನು ನೇಣಿನ ಕುಣಿಕೆಯಿಂದ ಬಿಡಿಸಿ ಬೆಡ್ ಮೇಲೆ ಮಲಗಿಸಿದ್ದಾರೆ. ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹಗಳು:
ಎರಡ್ಮೂರು ದಿನದಿಂದ ಮನೆಯಿಂದ ಕರೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪುತ್ರಿ ಶುಕ್ರವಾರ ಸಂಜೆ ಮನೆಗೆ ಬಂದಿದ್ದಾಳೆ. ಮನೆ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ತನ್ನ ಬಳಿಯಿದ್ದ ಮತ್ತೊಂದು ಕೀ ಬಳಸಿ ಬಾಗಿಲು ತೆರೆದಾಗ ತಾಯಿ ಮತ್ತು ಸಹೋದರ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರ ನೆರವು ಪಡೆದು ಪೊಲೀಸರಿಗೆ ಕರೆ ಮಾಡಿದ್ದಾಳೆ. ನಂತರ ಸ್ಥಳ್ಕಕೆ ಬಂದ ಪೊಲೀಸರು ಪರಿಶೀಲಿಸಿದಾಗ, ಎರಡು ಮೃತದೇಹಗಳು ಅರ್ಧಂಬರ್ಧ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಶನಿವಾರ ಮಧ್ಯಾಹ್ನ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ. ರಮ್ಯಾರ ಪುತ್ರಿ ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net