ಪತಿ ಜತೆ ಆಟೋದಲ್ಲಿ ಬಂದವಳು, ಗಂಡ ಬಾಡಿಗೆ ಕೊಡಲು ಚಿಲ್ಲರೆ ತರುವಷ್ಟರಲ್ಲಿ ಮಗನೊಂದಿಗೆ ನಾಪತ್ತೆ!; ಆಗಿದ್ದೇನು?

River
Published on

ಬೆಳಗಾವಿ: ಆಟೋದಲ್ಲಿ ಪತಿ ಜತೆಗೇ ಬಂದಿದ್ದ ಪತ್ನಿ, ಬಳಿಕ ಬಾಡಿಗೆ ಹಣ ಕೊಡಲು ಗಂಡ ಚಿಲ್ಲರೆ ತರಲು ಹೋಗಿ ಬರುವಷ್ಟರಲ್ಲಿ ಆಕೆ ಮಗನೊಂದಿಗೆ ಕಣ್ಮರೆಯಾಗಿದ್ದಾಳೆ. ಇಂಥದ್ದೊಂದು ಪ್ರಕರಣ ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಈ ಪ್ರಕರಣ ನಡೆದಿದ್ದು, ರುದ್ರವ್ವ ಬಸವರಾಜ್ ಬನ್ನೂರು (30) ಮತ್ತು ಆಕೆಯ ಪುತ್ರ ಶಿವಲಿಂಗಪ್ಪ ಬನ್ನೂರ (2) ನಾಪತ್ತೆಯಾದವರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರುದ್ರವ್ವ ತನ್ನ ಎರಡು ವರ್ಷದ ಪುತ್ರನ ಜೊತೆಗೆ ಇಡಗುಂಡಿಯಲ್ಲಿನ ತವರು ಮನೆಯಲ್ಲಿ ವಾಸವಿದ್ದಳು. ಆಕೆಯನ್ನು ಮನವೊಲಿಸಿದ್ದ ಬಸವರಾಜ್ ಆಕೆಯನ್ನು ರಾಮದುರ್ಗಕ್ಕೆ ಕರೆದುಕೊಂಡು ಬಂದಿದ್ದ. ಇಲ್ಲಿ ಆಟೋ ಬಾಡಿಗೆ ಕೊಡಲು ಬಸವರಾಜ್ ಚಿಲ್ಲರೆ ತರಲು ಹೋದಾಗ ಪುತ್ರನ ಜೊತೆಗೆ ರುದ್ರವ್ವ ಪಕ್ಕದ ನದಿಗೆ ಹಾರಿದ್ದಾಳೆ.

ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಪಕ್ಕದ ಮಲಪ್ರಭಾ ನದಿಗೆ ಪುತ್ರನೊಂದಿಗೆ ಈಕೆ ಹಾರಿದ್ದಾಳೆ. ತಾಯಿ-ಮಗು ನದಿಗೆ ಹಾರಿರುವುದನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ನದಿಯ ಪಕ್ಕದಲ್ಲಿರುವ ಚಪ್ಪಲಿ ನನ್ನ ಪತ್ನಿಯದ್ದು ಎಂದು ಬಸವರಾಜ್ ಮಾಹಿತಿ ನೀಡಿದ್ದು, ಅವರಿಬ್ಬರೂ ನದಿಗೆ ಹಾರಿರುವುದನ್ನು ಖಚಿತ ಪಡಿಸಿದೆ. ಸ್ಥಳಕ್ಕೆ ರಾಮದುರ್ಗ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ತಾಯಿ-ಮಗುವಿಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net